ಒಕ್ಕಲಿಗ ಜನಾಂಗದ ಏಳಿಗೆಗೆ ಕಾರ್ಯಕ್ರಮ ಹಮ್ಮಿಕೊಳ್ಳಿ
ಚಿಕ್ಕನಾಯಕನಹಳ್ಳಿ: ಬಾಲಗಂಗಾಧರನಾಥರು ವಿಧಿವಶರಾದಾಗ ಜನಾಂಗಕ್ಕೆ ಕಾಡಿದ ಅನಾಥ ಪ್ರಜ್ಞೆ, ಶಿವಕುಮಾರನಾಥ ಸ್ವಾಮೀಜಿಗಳ ನಿಧನದಿಂದ ಇನ್ನೂ ಹೆಚ್ಚಾಯಿತು ಎಂದು ಡಾ.ಎಸ್.ಪರಮೇಶ್ವರಪ್ಪ ನುಡಿದರು.
ಅವರು ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಶಿವಕುಮಾರನಾಥ ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ತುಮಕೂರಿನಲ್ಲಿ ಶಾಖಾಮಠ ಸ್ಥಾಪಿಸಿ ಜಿಲ್ಲೆಯಲ್ಲಿ ಜನಾಂಗದ ಅಭ್ಯುದಯಕ್ಕೆ ಶ್ರಮಿಸಬೇಕೆಂಬ ತುಡಿತ ಹೊಂದಿದ್ದಾಗಲೇ ಅವರು ನಮ್ಮನ್ನಗಲಿದ್ದು, ಜನಾಂಗಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಅವರು ವಿಷಾದಿಸಿದರು. ಈ ನಿಟ್ಟಿನಲ್ಲಿ ಜನಾಂಗದ ಏಳಿಗೆಗಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾವು ಅಗಲಿದ ಶ್ರೀಗಳಿಗೆ ನಿಜವಾದ ಶ್ರದ್ಧಾಂಜಲಿಯನ್ನು ಸಲ್ಲಿಸಬೇಕಾಗಿದೆ ಎಂದರು.
ಸಂಘದ ಗೌರವಾಧ್ಯಕ್ಷ ವಕೀಲ ಶ್ರೀನಿವಾಸಮೂರ್ತಿ ಮಾತನಾಡಿ ನಾಥಪರಂಪರೆಯನ್ನು ಹುಟ್ಟುಹಾಕಿ,
ಅದರಲ್ಲೇ ಇತಿಹಾಸ ಸೃಷ್ಟಿಸಿದ ಶ್ರೀಗಳು ಬಾಲಗಂಗಾಧರನಾಥರು. ಕೇವಲ 13 ವರ್ಷಗಳಲ್ಲಿ ಚದುರಿಹೋಗಿದ್ದ ಜನಾಂಗವನ್ನು ಒಟ್ಟುಗೂಡಿಸಿ ಶ್ರೀಮಠದ ಮೂಲಕ ಜನಾಂಗಕ್ಕೊಂದು ದಿಕ್ಕನ್ನು ತೋರಿದ ಪವಾಡ ಪುರುಷ. ರಾಜ್ಯದಲ್ಲಿ ಯಾವ ಮಠವು ಶಾಖಾಮಠಗಳನ್ನು ಸ್ಥಾಪಿಸುವ ಧೈರ್ಯ ಮಾಡದಿದ್ದ ಸಂದರ್ಭದಲ್ಲಿ ಆಲದ ಮರದ ಬಿಳಿಲುಗಳಂತೆ ಶಾಖಾಮಠಗಳನ್ನು ಸ್ಥಾಪಿಸುವ ಮೂಲಕ ಜನಾಂಗದ ಏಳಿಗೆಗೆ ಶ್ರಮಿಸಿದರು.ಅಂತಹವರು ಸಾಮೀಪ್ಯದಲ್ಲಿ ಶಿವಕುಮಾರನಾಥ ಸ್ವಾಮೀಜಿಗಳು ತಮ್ಮ ಸರಳ ಸಜ್ಜನಿಕೆಯಿಂದ ಜಿಲ್ಲೆಯಲ್ಲಿ ಒಕ್ಕಲಿಗ ಜನಾಂಗವನ್ನು ಅಂಧಕಾರದಿಂದ ಮೇಲೆತ್ತಿದರು. ಅಂತಹ ಒಂದು ಬಿಳಿಲು ಈಗ ಕಳಚಿ ಬಿದ್ದಿದೆ.
ಇಂತಹ ಧೀಶಕ್ತಿ ಮತ್ತೊಮ್ಮೆ ಹುಟ್ಟಿಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ ಎಂದರು.
ಅನಾಥ: ಮತ್ತೋರ್ವ ಮುಖಂಡರಾದ ಎಚ್.ಬಿ.ಎಸ್. ನಾರಾಯಣಗೌಡರು ಮಾತನಾಡಿ ಒಂದೂವರೆ ವರ್ಷದಲ್ಲಿ ಜನಾಂಗ ಇಬ್ಬರು ಸ್ವಾಮೀಜಿಗಳನ್ನು ಕಳೆದುಕೊಂಡು ಅನಾಥವಾಗಿದೆ. ಜನಾಂಗದ ಮೇಲೆ ಒಂದರ ಹಿಂದೊಂದರಂತೆ ಎರಡು ಧೂಮಕೇತು ಅಪ್ಪಳಿಸಿದಂತಾಗಿದೆ. ವಿವಿಧ ರಾಜಕೀಯ ಗುಂಪುಗಳಲ್ಲಿ ಗುರುತಿಸಿಕೊಂಡಿರುವ ಪರಿಣಾಮ ಜನಾಂಗದ ಸಂಘಟನೆ ಕುಂಠಿತವಾಗಿದೆ. ಮುಂಬರುವ ದಿನಗಳಲ್ಲಿ ರಾಜಕೀಯ ಬದಿಗಿಟ್ಟು ಜನಾಂಗದ ಸಂಘಟನೆಗೆ ಹೆಚ್ಚು ಒತ್ತು ನೀಡುವ ಮೂಲಕ ಶ್ರೀಗಳ ಆತ್ಮಕ್ಕೆ ಶಾಂತಿ ತರಬೇಕು ಎಂದರು.