ಕಳೆದು ಹೋದ ಉತ್ತರಪತ್ರಿಕೆ: ತನಿಖೆಗೆ ಆಗ್ರಹ
ಕ.ಪ್ರ.ವಾರ್ತೆ ತುಮಕೂರು ಡಿ.24
ತುಮಕೂರು ವಿ.ವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪರೀಕ್ಷೆಯ ಕಳೆದುಹೋದ ಉತ್ತರ ಪತ್ರಿಕೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಎಬಿವಿಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ತುಮಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನ. 29 ರಂದು 78 ವಿದ್ಯಾರ್ಥಿಗಳು ಅಂತಿಮ ಬಿ.ಎಸ್ಸಿ. 5ನೇ ಸೆಮಿಸ್ಟರ್ನ ಗಣಿತಶಾಸ್ತ್ರ ಪರೀಕ್ಷೆ ಬರೆದಿದ್ದರು. ಅದರಲ್ಲಿ 78 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಕಾಣೆಯಾಗಿದ್ದವು. ಹೀಗಾಗಿ ಉತ್ತರ ಪತ್ರಿಕೆಗಳನ್ನು ಕಳೆದುಕೊಂಡ ವಿದ್ಯಾರ್ಥಿಗಳು ಎರಡನೇ ಬಾರಿ ಪರೀಕ್ಷೆಯನ್ನು ಬರೆದಿದ್ದಾರೆ. ಈ ರೀತಿಯಾಗಿ ಬೇಜವಾಬ್ದಾರಿ ತನದಿಂದ ಉತ್ತರ ಪತ್ರಿಕೆಗಳನ್ನು ಕಳೆದು ಹಾಕಿ ವಿದ್ಯಾರ್ಥಿಗಳಿಗೆ ಒತ್ತಡ ಉಂಟುಮಾಡಿ ತೊಂದರೆ ನೀಡುವುದನ್ನು ಖಂಡಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಅಮರೇಶ್ ಮಾತನಾಡಿ ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ವಿ.ವಿ. ಪರೀಕ್ಷಾಂಗ ಕುಲಸಚಿವರು ಮತ್ತು ಕಾಲೇಜಿನ ಪ್ರಾಂಶುಪಾಲರು ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟುಮಾಡಿದೆ. ಈಗಾಗಲೇ ಎರಡೆರಡು ಬಾರಿ ಪರೀಕ್ಷೆಗಳನ್ನು ಬರೆದು ತೊಂದರೆ ಅನುಭವಿಸಿರುವ ವಿದ್ಯಾರ್ಥಿಗಳು ಫಲಿತಾಂಶದ ಬಗ್ಗೆನೂ ಅನುಮಾನ ಪಡುವಂತಾಗಿದೆ.
ಇದಲ್ಲದೆ ಈ ಹಿಂದೆ ಇದೇ ಪರಿಕ್ಷಾ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆಯು ಕಳೆದು ವಿದ್ಯಾರ್ಥಿಯು ತೊಂದರೆಗೀಡಾಗಿದ್ದನ್ನು ಖಂಡಿಸಿದರು. ಆದ್ದರಿಂದ ಈ ರೀತಿಯ ಎರಡು ಪ್ರತ್ಯೇಕ ಬೇಜವಬ್ದಾರಿ ತನದ ಘಟನೆಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಮಾಡಬಾರದು, ಮರುಪರೀಕ್ಷೆಯ ಮೌಲ್ಯಮಾಪನವನ್ನು ತುಮಕೂರು ವಿವಿಯ ಉಪನ್ಯಾಸಕರೇ ನಡೆಸಬೇಕು ಎಂದರು.