ಜಿಎಸ್ಎಸ್ ಗಂಭೀರ, ಶಿಸ್ತಿನ ಮನುಷ್ಯ
ಕನ್ನಡಪ್ರಭ ವಾರ್ತೆ ತುಮಕೂರು ಡಿ.24
ತುಮಕೂರಿನ ದೇಸಿ ಬಳಗ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ನಗರದ ಕೃಷ್ಣರಾಜೇಂದ್ರ ಟೌನ್ಹಾಲ್ ಬಳಿ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ ಶ್ರದ್ಧಾಂಜಲಿ ಹಮ್ಮಿಕೊಳ್ಳಲಾಗಿತ್ತು. ಹಿರಿಯ ನಿವೃತ್ತ ಉಪನ್ಯಾಸಕ ಪ್ರೊ.ಜಿ.ಎಂ. ಶ್ರೀನಿವಾಸಯ್ಯ ಅವರ ನೇತೃತ್ವದಲ್ಲಿ ಉಪನ್ಯಾಸಕರು, ಉದಯೋನ್ಮುಖ ಬರಹಗಾರರು, ವಿದ್ಯಾರ್ಥಿಗಳು ಡಾ.ಜಿ.ಎಸ್.ಎಸ್.ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ.ಜಿ.ಎಂ. ಶ್ರೀನಿವಾಸಯ್ಯ, 1953-54ನೇ ಇಸವಿಯಲ್ಲಿ ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಡಾ.ಜಿ.ಎಸ್. ಶಿವರುದ್ರಪ್ಪ ನಮ್ಮ ಗುರುಗಳಾಗಿದ್ದರು. ಸದಾ ಗಂಭೀರ ಮತ್ತು ಶಿಸ್ತಿನ ಮನುಷ್ಯರಾಗಿದ್ದರು. ರಾಷ್ಟ್ರಕವಿ ಕುವೆಂಪು ಅವರ ನೆಚ್ಚಿನ ಶಿಷ್ಯರಾಗಿ ಗುರುಶಿಷ್ಯ ಪರಂಪರೆಗೆ ಒಳ್ಳೆಯ ಉದಾಹರಣೆಯಾಗಿದ್ದಾರೆ ಎಂದರು.
ತಾವು ಸಾಹಿತ್ಯ ರಚಿಸುವುದರ ಜೊತೆಗೆ ತಮ್ಮ ಶಿಷ್ಯವೃಂದದಲ್ಲಿ ಸಾಹಿತ್ಯದ ಆಸಕ್ತಿ ಇರುವವರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ತಮ್ಮ ಸಮರ್ಥ ಆಡಳಿತದ ಮೂಲಕ ಕನ್ನಡ ಅಧ್ಯಯನ ಕೇಂದ್ರ ರಾಷ್ಟ್ರಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಿದ್ದರು. ಅವರ ನೂರಾರು ಕವನಗಳು ಜನರಲ್ಲಿ ಮಾನವೀಯ ಮೌಲ್ಯಬಿತ್ತುವುದರ ಜೊತೆಗೆ ಮೌಢ್ಯದಿಂದ ಹೊರಬರುವಂತೆ ಮಾಡಿದ್ದವು ಎಂದು ನೆನಪು ಮಾಡಿಕೊಂಡರು.
ಆಡಳಿತಗಾರ: ಬರಹಗಾರರಾದ ಬಾ.ಹ.ರಮಾಕುಮಾರಿ ಮಾತನಾಡಿ, ಕವಿಯಾಗಿ, ವಿಮರ್ಶಕರಾಗಿದ್ದ ಡಾ.ಜಿ.ಎಸ್. ಶಿವರುದ್ರಪ್ಪ ಒಳ್ಳೆಯ ಆಡಳಿತಗಾರರು ಆಗಿದ್ದರು. ತುಮಕೂರು ಜಿಲ್ಲಾ ಬರಹಗಾರರ ವೇದಿಕೆಯ ಆರಂಭದಲ್ಲಿ ಅದಕ್ಕೆ ಅಮೂಲ್ಯ ಸಲಹೆ, ಸಹಕಾರಗಳನ್ನು ನೀಡುತ್ತಾ ರಾಜ್ಯಮಟ್ಟದಲ್ಲಿ ಹೆಸರು ಮಾಡಲು ಸಹಕಾರಿಯಾದವರು. ಅವರ ಕವಿತೆಗಳು ಮನಸ್ಸಿಗೆ ಮುದ ನೀಡುವ ಜೊತೆಗೆ ಅರಿವನ್ನು ಹೆಚ್ಚಿಸುತ್ತವೆ. ಶಿಕ್ಷಕ ವೃತ್ತಿಯಲ್ಲಿ ಮತ್ತು ಸಾಹಿತಿಯಾಗಿ ಯಾವುದೇ ವಿವಾದಕ್ಕೆ ಒಳಗಾಗದೆ ಎಲ್ಲವನ್ನು ಸಮನ್ವಯತೆಯಿಂದ ನೋಡಿಕೊಂಡು ಹೋಗುವ ಶಕ್ತಿ ಜಿ.ಎಸ್.ಎಸ್.ಅವರಿಗೆ ಇತ್ತು ಎಂದು ಬಣ್ಣಿಸಿದರು.
ಸಿ.ನರಸಿಂಹಯ್ಯ ಮಾತನಾಡಿ, ಜಾತಿ, ಧರ್ಮವನ್ನು ಮೀರಿ ಬೆಳೆದ ಡಾ.ಜಿ.ಎಸ್.ಎಸ್. ಪ್ರೀತಿಯಿಲ್ಲದ ಮೇಲೆ ಎಂಬ ಕವನದ ಸಾಲುಗಳ ಮೂಲಕ ಜನರಿಗೆ ಪ್ರೀತಿಯ ಮಹತ್ವವನ್ನು ಅರ್ಥ ಮಾಡಿಸಿದ್ದರು ಎಂದರು.