ಜಿಲ್ಲಾ ಬರ ನಷ್ಟ ರು. 945 ಕೋಟಿ
ಕನ್ನಡಪ್ರಭ ವಾರ್ತೆ ತುಮಕೂರು ಡಿ.24
ಕೇಂದ್ರ ಅಧ್ಯಯನ ತಂಡ ತುಮಕೂರು ಜಿಲೆಯ ಬರಪೀಡಿತ ತಾಲೂಕುಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.
ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಕೃಷಿ ಮತ್ತು ಸಹಕಾರ ಇಲಾಖೆಯ ನಿರ್ದೇಶಕ ಸಿ.ಕೆ. ಚೌಧುರಿ ಹಾಗೂ ಜಂಟಿ ನಿರ್ದೇಶಕ ಆರ್.ಬಿ. ಸಿನ್ಹಾ ತಂಡದಲ್ಲಿದ್ದರು. ಈ ತಂಡ ತುಮಕೂರು ಜಿಲ್ಲೆಯ ಬರಪೀಡಿತ ತಾಲೂಕುಗಳೆಂದು ಘೋಷಿಸಲ್ಪಟ್ಟಿರುವ ಮಧುಗಿರಿ, ಶಿರಾ, ಕೊರಟಗೆರೆ, ಮಧುಗಿರಿ ತಾಲೂಕುಗಳಿಗೆ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಿ, ರೈತರ ಸಮಸ್ಯೆ, ಬೆಳೆ ನಷ್ಟ ಸೇರಿದಂತೆ ಇತರೆ ಸಮಸ್ಯೆ ಆಲಿಸಿತು.
ಬರ ಅಧ್ಯಯನಕ್ಕೂ ಮುನ್ನ ತುಮಕೂರಿನ ಜಿಲ್ಲಾಧಿಕಾರಿಗಳ ಕ:ಕೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ಸಂಸದ ಜಿ.ಎಸ್. ಬಸವರಾಜು, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿಪಂ ಸಿಇಓ ಗೋವಿಂದರಾಜು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ತಂಡ ಚರ್ಚೆ ನಡೆಸಿತು.
ಈ ಸಂದರ್ಭದಲ್ಲಿ ತಂಡಕ್ಕೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಈ ಬಾರಿ ಜಿಲ್ಲೆಯ 4 ತಾಲೂಕುಗಳಲ್ಲಿ ಬರಗಾಲ ಆವರಿಸಿದೆ. ಬರಗಾಲದಿಂದಾಗಿ ಕುಡಿಯುವ ನೀರಿನ ಸಮಸ್ಯೆ, ಅಂತರ್ಜಲ ಕುಸಿತ, ಜಾನುವಾರುಗಳ ಮೇವಿನ ಸಮಸ್ಯೆ, ನಿರುದ್ಯೋಗ ಸೇರಿದಂತೆ ಇತರೆ ಸಮಸ್ಯೆಗಳುಂಟಾಗಿವೆ ಎಂದರು.
ಈ ಬಾರಿಯ ಬರಗಾಲದಿಂದಾಗಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಷ್ಟ ಒಟ್ಟು 945 ಕೋಟಿ ರು. ಎಂದು ಅಂದಾಜಿಸಲಾಗಿದೆ ಎಂದು ತಂಡಕ್ಕೆ ಮಾಹಿತಿ ನೀಡಿದರು.
ಭರವಸೆ: ಮಾಹಿತಿ, ಮನವಿ ಆಲಿಸಿದ ಕೇಂದ್ರ ಬರ ಅಧ್ಯಯನ ತಂಡದ ನಿರ್ದೇಶಕ ಆರ್.ಬಿ. ಸಿನ್ಹಾ ಮಾತನಾಡಿ, ಕ್ರಮದ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಜಿಲ್ಲೆಯ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ತಡ ಮಾಡದೇ ನೀಡಿದಲ್ಲಿ, ಕೂಡಲೇ ಪರಿಹಾರ ಒದಗಿಸಲು ಸಿದ್ಧವಿರುವುದಾಗಿ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ರಾಜ್ಯದ ಬರಗಾಲ ಅಧ್ಯಯನಕ್ಕೆ ಕೇಂದ್ರದ 4
ತಂಡಗಳು ಪ್ರವಾಸ ಕೈಗೊಂಡಿವೆ. ರಾಜ್ಯದ 174 ತಾಲೂಕುಗಳಲ್ಲಿ 98 ತಾಲೂಕುಗಳು ಬರಪೀಡಿತವಾಗಿವೆ ಎಂದು ತಿಳಿಸಿದರು.