ತೆಂಗು ಉತ್ಪಾದಕರ ಕಂಪನಿಗೆ ಹಸಿರು ನಿಶಾನೆ
ತುರುವೇಕೆರೆ: ರಾಜ್ಯದಲ್ಲೇ ಪ್ರಪ್ರಥಮವಾಗಿ ತಾಲೂಕಿನಲ್ಲಿ ತೆಂಗು ಉತ್ಪಾದಕರ ಕಂಪನಿಯನ್ನು ತೆರೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ರಾಜ್ಯ ತೆಂಗು ಬೆಳೆಗಾರರ ಸಂಘದ ಸಂಚಾಲಕ ಹಾಗೂ ತಾಲೂಕಿನ ಕಲ್ಪತರು ತೆಂಗು ಉತ್ಪಾದಕರ ಕಂಪನಿಯ ಅಧ್ಯಕ್ಷ ಎಂ.ಬಿ. ಸಿದ್ದಬಸಪ್ಪ ಪ್ರಕಟಿಸಿದರು.
ಪರ್ತಕರ್ತರೊಂದಿಗೆ ಮಾತನಾಡಿದ ಅವರು ಇದರಲ್ಲಿ ಕನಿಷ್ಠ 40 ಜನ ಸದಸ್ಯರಿರುವರು. 20 ಸಂಘಗಳಿಗೆ ಅಂದರೆ 1 ಲಕ್ಷ ತೆಂಗಿನ ಮರಕ್ಕೆ ಒಂದು ಒಕ್ಕೂಟ. 10 ಒಕ್ಕೂಟ ಸೇರಿ ಅಂದರೆ 10 ಲಕ್ಷ ತೆಂಗಿನ ಮರಗಳಿಗೆ 1 ಕಂಪನಿ ತೆರೆಯಲು ತೆಂಗು ಅಭಿವೃಧ್ಧಿ ಮಂಡಲಿ ಅವಕಾಶವನ್ನು ಕಲ್ಪಿಸಿದೆ ಎಂದರು.
ಸದ್ಯ ತಾಲೂಕಿನಲ್ಲಿ ಸುಮಾರು 10 ಸಾವಿರ ಸದಸ್ಯರಿದ್ದಾರೆ. ಮುಂಬರುವ ದಿನಗಳಲ್ಲಿ ಕಂಪನಿ ತೆರೆಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತಮ್ಮ ಕಂಪನಿ ರಾಜ್ಯದಲ್ಲಿ ಪ್ರಪ್ರಥಮದಾಗಿದ್ದರೆ, ದೇಶದಲ್ಲಿ 9 ನೇ ಕಂಪನಿಯಾಗಿದೆ ಎಂದು ಸಿದ್ದಬಸಪ್ಪ ಹೇಳಿದರು.
ಮರಳಿ ಹಳ್ಳಿಗೆ: ಬೇಸಾಯದಿಂದಾಗಲೀ ಅಥವಾ ತೋಟಗಾರಿಕೆಯಿಂದಾಗಲೀ ಹಣ ಸಂಪಾದನೆ ಸಾಧ್ಯವಿಲ್ಲವೆಂದು ಪಟ್ಟಣ ಸೇರಿರುವ ತಾಲೂಕಿನ ಸಾವಿರಾರು ಯುವಕ ಯುವತಿಯರು ಮರಳಿ ಹಳ್ಳಿಗೆ ಬರುವ ಹಾಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತೆಂಗಿನ ಮರದಿಂದ ಉತ್ಪತ್ತಿಯಾಗುವ ಹೆಡೆಮಟ್ಟೆ, ಸೋಗೆ ಕಡ್ಡಿ, ಸೋಗೆ, ತೆಂಗಿನ ಮಟ್ಟೆ, ತೆಂಗಿನ ಚಿಪ್ಪು ಮೊದಲಾದ ಉತ್ಪನ್ನಗಳನ್ನು ಮಹಿಳೆಯರಿಂದಲೇ ತೂಕದ ಮೂಲಕ ಶೇಖರಣೆ ಮಾಡಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ಆನ್ ಲೈನ್ ಮೂಲಕ ಹಣ ನೀಡಲಾಗುವುದು. ತೆಂಗಿನ ಉತ್ಪನ್ನಗಳ ಮಾರುಕಟ್ಟೆಯನ್ನು ಕಂಪನಿ ಮಾಡಲಿದೆ. ಕೇಂದ್ರ ಸರ್ಕಾರ ಕಂಪನಿ ಸ್ಥಾಪಿಸಲು 25 ಲಕ್ಷ ರು.ಗಳ ಅನುದಾನ ನೀಡಲಿದೆ. ಬಿಡುಗಡೆಗೆ ಮುನ್ನು ಕಂಪನಿ 1 ಕೋಟಿ ರು.ಗಳನ್ನು ತೆಂಗು ಅಭಿವೃಧ್ಧಿ ಮಂಡಲಿಗೆ ಜಮಾ ಮಾಡಬೇಕಿದೆ. ಇದನ್ನು ಪ್ರತಿಯೊಬ್ಬ ಸದಸ್ಯರಿಂದ ತೆಂಗಿನ ಮರಕ್ಕೆ ಒಂದು ಕಾಯಿಯಂತೆ ಸಂಗ್ರಹ ಮಾಡಲಾಗುವುದು. ಇದರಿಂದ ಕನಿಷ್ಠವೆಂದರೂ 10 ಲಕ್ಷ ತೆಂಗಿನ ಕಾಯಿ ಸಂಗ್ರಹವಾಗಲಿದೆ. ಕಂಪನಿ ಪ್ರಾರಂಭಗೊಂಡಲ್ಲಿ ಸಾವಿರಾರು ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ. ಪ್ರತಿ ಗ್ರಾಮದಲ್ಲಿ ಕೈಗಾರಿಕಾ ಕ್ರಾಂತಿ ನಡೆಯಲಿದೆ ಎಂದು ಸಿದ್ದಬಸಪ್ಪ ಆಶಾಭಾವನೆ ವ್ಯಕ್ತಪಡಿಸಿದರು.
15 ಸಂಘ ಶೀಘ್ರ ಆರಂಭ: ಡಿ.26 ರಂದು ತಾಲೂಕಿನಲ್ಲಿ ಸುಮಾರು 15 ಸಂಘಗಳು ಪ್ರಾರಂಭಗೊಳ್ಳುವುವು. 28 ರಂದು ಮಾಚೇನಹಳ್ಳಿಯ ಬಾಪೂಜಿ ಕೇಂದ್ರ ಪ್ರೌಢಾಶಾಲಾ ಆವರಣದಲ್ಲಿ ತೆಂಗು ಉತ್ಪಾದಕರ ಸಂಘಗಳ ಒಕ್ಕೂಟವನ್ನು ತೋಟಗಾರಿಕಾ ಇಲಾಖಾ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡ ಉದ್ಘಾಟಿಸುವರು. ಶಾಸಕ ಎಂ.ಟಿ.ಕೃಷ್ಣಪ್ಪ ಒಕ್ಕೂಟದ ನಾಮಫಲಕ ಅನಾವರಣ ಮಾಡುವರು. ತೋಟಗಾರಿಕಾ ಇಲಾಖಾ ನಿರ್ದೇಶಕ ಡಾ.ಡಿ.ಎಲ್.ಮಹೇಶ್ವರ್ ರೈತರು ನೀಡುವ ತೆಂಗಿನ ಕಾಯಿಯನ್ನು ಹರಾಜು ಹಾಕುವ ಮೂಲಕ ರೈತರ ಷೇರನ್ನು ಕಂಪನಿಗೆ ನೀಡುವರು. ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಸಂಘಗಳಿಗೆ ನೋಂದಣಿ ಪತ್ರ ವಿತರಣೆ ಮಾಡುವರು. ಮುಖ್ಯ ಅತಿಥಿಗಳಾಗಿ ತೋಟಗಾರಿಕಾ ಜಂಟಿ ನಿರ್ದೇಶಕ ಡಾ.ದುಂಡಿ, ಉಪನಿರ್ದೇಶಕ ವಿಜಯಕುಮಾರ್ ಹಳ್ಳಿಕೇರಿ, ಉಪನಿರ್ದೇಶಕಿ ಜಿ.ಸವಿತಾ, ತಹಸೀಲ್ದಾರ್ ಜಿ.ನಂಜಪ್ಪ, ಕಲ್ಪತರು ತೆಂಗು ಉತ್ಪಾದಕರ ಕಂಪನಿಯ ಉಪಾಧ್ಯಕ್ಷ ಡಾ.ಎಸ್.ವಿ.ಗೋವಿಂದಪ್ಪ, ಪ್ರಗತಿ ಪರ ರೈತ ಡಾ. ಬಿ.ನಂಜಪ್ಪ,
ತಾ.ತೆಂಗು ಮತ್ತು ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಎಂ. ವಿಶ್ವೇಶ್ವರಯ್ಯ, ಹುಲ್ಲೇಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ವಿ. ಆನಂದಕುಮಾರ್, ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಜಿ.ಡಿ.ಗಂಗಾಧರ್, ಸಹಾಯಕ ಕೃಷಿ ನಿರ್ದೇಶಕ ಬಿ.ವಿ.ಲಿಂಗರಾಜಪ್ಪ ಮೊದಲಾದವರು ಭಾಗವಹಿಸುವರು ಎಂದು ಕಂಪನಿಯ ಅಧ್ಯಕ್ಷ ಸಿದ್ದಬಸಪ್ಪ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಂಪನಿಯ ಉಪಾಧ್ಯಕ್ಷ ಡಾ.ಗೋವಿಂದಪ್ಪ, ನಿರ್ದೇಶಕರಾದ, ತಂಡಗ ಸೋಮಶೇಖರ್, ಜಯಕುಮಾರ್, ಪ್ರಸನ್ನ, ನಿತ್ಯಾನಂದ್, ನಂದೀಶ್, ವಿಶ್ವನಾಥ್, ನಿರಂಜನ್, ರವೀಂದ್ರ, ಅಶೋಕ್, ಗುರುರಾಜ್, ಕಾಂತರಾಜು, ಸಂಗಮೇಶ್ ಇದ್ದರು.