ಮಳೆ ಬೀಳದೆ ಭಾರಿ ನಷ್ಟ: ಸಚಿವ ಜಯಚಂದ್ರ
ಕನ್ನಡಪ್ರಭ ವಾರ್ತೆ ಮಧುಗಿರಿ ಡಿ.24
ತುಮಕೂರು ಜಿಲ್ಲೆಯಲ್ಲಿ ಮಳೆ ಬೀಳದೆ ಅನಾವೃಷ್ಟಿ ಸಂಭವಿಸಿ ಈಗಾಗಲೇ 9 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಿಸಿದ್ದು ಜಿಲ್ಲೆಯಲ್ಲಿ 945 ಕೋಟಿ ರು.ರೈತರ ಬೆಳೆಗಳು ನಷ್ಟವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಕಾನೂನು ಸಂಸದಿಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದರು.
ಮಂಗಳವಾರ ಮಧುಗಿರಿ ತಾಲೂಕಿನ ಚಿಕ್ಕಮಾಲೂರು,ಕೊಡಿಗೇನಹಳ್ಳಿ ಹಾಗೂ ಬ್ಯಾಲ್ಯ ಗ್ರಾಮಗಳಲ್ಲಿ ಅನಾವೃಷ್ಟಿಯಿಂದ ರೈತರು ಬಿತ್ತಿದ ಬೆಳೆಗಳು ನಾಶವಾಗಿ ನಷ್ಟ ಸಂಭವಿಸಿರುವ ಜಮೀನುಗಳಿಗೆ ಕೇಂದ್ರ ಬರ ಅಧ್ಯಯನ ತಂಡದ ಜೊತೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿ ಈ ವಿಷಯ ತಿಳಿಸಿದರು.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಪದೇ ಪದೇ ಮರುಕಳಿಸುತ್ತಿರುವ ಹಿನ್ನಲೆಯಲ್ಲಿ ಬರಗಾಲ ಎದುರಿಸಲು ಶಾಶ್ವತ ಯೋಜನೆ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸಳೆಯಲು ತಂಡದವರಿಗೆ ಮನವರಿಕೆ ಮಾಡಿದ್ದೇವೆ ಎಂದು ವಿವರಿಸಿದರು. ಜಿಲ್ಲೆಯಲ್ಲಿ 10 ತಾಲೂಕುಗಳ ಪೈಕಿ ಈಗಾಗಲೇ 9 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಿಸಿದೆ. ತಿಪಟೂರು ತಾಲೂಕನ್ನು ಕೂಡ ಇನ್ನು ಒಂದು ವಾರದ ಒಳಗೆ ಬರಪೀಡಿತ ಪ್ರದೇಶವೆಂದು ಘೋಷಿಸುವುದಾಗಿ ತಿಳಿಸಿ, ರಾಜ್ಯದಲ್ಲಿ 176 ತಾಲೂಕುಗಳ ಪೈಕಿ 98 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಇನ್ನು 30 ತಾಲೂಕುಗಳು ಸೇರ್ಪಡೆಯಾಗುವ ಸಾಧ್ಯತೆ ಇದ್ದು ಮಳೆಯಾಧಾರಿತ ಬೆಳಗಳಲ್ಲದೆ ವಾಣಿಜ್ಯ ಬೆಳೆಗಳಾದ ಅಡಕೆ, ತೆಂಗು ಕೂಡ ನೀರಿಲ್ಲದೆ ಒಣಗಿವೆ. ಕುಡಿವ ನೀರಿಗೆ ಆದ್ಯತೆ ನೀಡಲಾಗುವುದು. ಒಟ್ಟಾರೆ ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು.
ಕೇಂದ್ರ ಅಧ್ಯಯನ ತಂಡದ ಜಂಟಿ ಕಾರ್ಯದರ್ಶಿ ಆರ್.ಬಿ.ಸಿನ್ಹಾ ಮಾತನಾಡಿ, ಈ ಭಾಗದಲ್ಲಿ ಅಧ್ಯಯನ ನಡೆಸಿದ್ದು ಕುಡಿವ ನೀರಿನ ಸಮಸ್ಯೆ, ಆರ್ಥಿಕ ಬೆಳೆಗಳು ಸಂಪೂರ್ಣ ನಾಶವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿಗಳು ನಷ್ಟದ ಬಗ್ಗೆ ನೀಡುವ ವರದಿ ಆಧರಿಸಿ ಕೇಂದ್ರಕ್ಕೆ ಅಂಕಿ-ಅಂಶಗಳೊಂದಿಗೆ ವಿವರಿಸಿ ಅಂತಿಮವಾಗಿ ರಾಜ್ಯದಲ್ಲಿ ಸಂಭವಿಸಿರುವ ಒಟ್ಟು ನಷ್ಟದ ಬಗ್ಗೆ ವರದಿ ತಯಾರಿಸಿ ಅಧಿಕ ಅನುದಾನ ಬಿಡುಗಡೆ ಮಾಡುವಂತೆ ಶಿಫಾರಸು ಮಾಡುವುದಾಗಿ ತಿಳಿಸಿದರು.
ಕೇಂದ್ರದ ಕೃಷಿ ಜಂಟಿ ನಿರ್ದೇಶಕ ಚೌಧರಿ, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿ.ಪಂ.ಸಿಇಓ ಗೋವಿಂದರಾಜು, ಸಂಸದ ಜಿ.ಎಸ್.ಬಸವರಾಜು, ಎಂಎಲ್ಸಿ ಡಾ.ಹುಲಿನಾಯ್ಕರ್, ಎಸಿ ತಬಸ್ಸುಮ್ ಜುಹೇರಾ, ತಹಸೀಲ್ದಾರ್ ರಮೇಶ್, ಇಓ ಮಹಾಲಿಂಗಯ್ಯ, ಎಇಇ ಕೃಷ್ಣಮೂರ್ತಿ, ಕೃಷಿ ಅಧಿಕಾರಿ ದೀಪಶ್ರೀ, ಕಾಂಗ್ರೆಸ್ ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ, ಗ್ರಾ.ಪಂ.ಅಧ್ಯಕ್ಷ ಎಚ್.ಭೈರಣ್ಣ, ಜಗದೀಶ್, ಪಶು ಇಲಾಖೆ ಅಧಿಕಾರಿ ದೇವರಾಜು, ರೇಷ್ಮೆ ವಿಸ್ತರಣಾಧಿಕಾರಿ ಟಿ.ಲಕ್ಷ್ಮೀನರಸಯ್ಯ ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ 10 ತಾಲೂಕುಗಳ ಪೈಕಿ ಈಗಾಗಲೇ 9 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಿಸಿದೆ. ತಿಪಟೂರು ತಾಲೂಕನ್ನು ಕೂಡ ಇನ್ನು ಒಂದು ವಾರದ ಒಳಗೆ ಬರಪೀಡಿತ ಪ್ರದೇಶವೆಂದು ಘೋಷಿಸುವುದಾಗಿ ತಿಳಿಸಿ, ರಾಜ್ಯದಲ್ಲಿ 176 ತಾಲೂಕುಗಳ ಪೈಕಿ 98 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ.