ರೈತನೇ ಬೆಲೆ ನಿಗದಿ ಮಾಡುವ ವಾತಾವರಣ ನಿರ್ಮಾಣವಾಗಲಿ
ಕ.ಪ್ರ.ವಾರ್ತೆ ಕೊರಟಗೆರೆ ಡಿ.24
ಕೈಗಾರಿಕೋದ್ಯಮಿಗಳು ಉತ್ಪಾದಿಸಿದ ವಸ್ತುವಿನ ಬೆಲೆಯನ್ನು ಅವರೆ ನಿರ್ಧರಿಸುತ್ತಾರೆ. ಆದರೆ ರೈತರು ತಾನು ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ರೈತನೇ ತನ್ನ ಬೆಳೆಗೆ ಬೆಲೆ ನಿಗದಿ ಮಾಡುವ ವಾತಾವರಣ ನಿರ್ಮಾಣವಾಗಬೇಕು ಎಂದು ಶಾಸಕ ಪಿ.ಆರ್. ಸುಧಾಕರಲಾಲ್ ತಿಳಿಸಿದರು.
ಅವರು ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ರೈತರ ದಿನಾಚರಣೆ ಮತ್ತು ಕೃಷಿ ಮಾಹಿತಿ, ಜಾಗೃತಿ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತನು ತಾನು ಬೆಳೆದ ಆಹಾರ ಪದಾರ್ಥಕ್ಕೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರ ಸಿಗುತ್ತಿದೆ. ಆದ್ದರಿಂದ ಇನ್ನು ಮುಂದೆ ತನ್ನ ಪದಾರ್ಥಗಳಿಗೆ ಅವನೆ ದರ ನಿರ್ಧರಿಸಿದಾಗ ಮಾತ್ರ ರೈತ ಏಳಿಗೆ ಹೊಂದಲು ಸಾಧ್ಯ ಎಂದರು.
ರೈತರು ಸೇರಿದಂತೆ ಶ್ರೀಸಾಮಾನ್ಯನು ನೆಮ್ಮದಿಯಿಂದ ಬದುಕ ಬೇಕಾದರೆ ಈ ಬಯಲುಸೀಮೆಯ ಭಾಗ ನೀರಾವರಿ ಪ್ರದೇಶವಾಗಿ ಪರಿವರ್ತನೆಯಾಗಬೇಕು. ಇದಕ್ಕಾಗಿ ತನ್ನ ಶಾಸಕರ ಅವಧಿಯಲ್ಲಿ ಪ್ರಾಮಾಣಿಕವಾಗಿ ಧ್ವನಿ ಎತ್ತಿ ರೈತರ ಪರವಾಗಿರುತ್ತೇನೆ. ಯಾವುದಾರೂ ಯೋಜನೆಯಲ್ಲಾದರೂ ನೀರಾವರಿ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು. ಇದಕ್ಕಾಗಿ ಹೋರಾಡಲು ಸಿದ್ಧನಿದ್ದು ರೈತರು ಬೃಹತ್ ಸಂಖ್ಯೆಯಲ್ಲಿ ಬೆಂಬಲ ನೀಡಬೇಕು ಎಂದ ಅವರು ಸರ್ಕಾರದ ಸೌಲಭ್ಯಗಳು ನಿಗದಿತ ಅವಧಿಯೊಳಗೆ ರೈತರಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಚಿಂತನೆ ಅಗತ್ಯ: ಬದಲಾಗುತ್ತಿರುವ ಹವಾಮಾನದ ವೈಪರೀತ್ಯಕ್ಕೆ ತಕ್ಕಂತೆ ರೈತರು ಬೆಳೆಗಳನ್ನು ಇಡಲು ಚಿಂತಿಸಬೇಕು ಎಂದರು. ಕಳೆದ 3 ವರ್ಷಗಳಿಂದಲೂ ಈ ಭಾಗದಲ್ಲಿ ಮಳೆ ಇಲ್ಲದೆ ಬರದ ಛಾಯೆ ತಾಂಡವವಾಡುತ್ತಿದ್ದು ಈ ಭಾರಿಯೂ ಮಳೆಯಿಲ್ಲದೆ ರೈತರು ಸಂಕಷ್ಟದಲ್ಲಿದ್ದು ಸರ್ಕಾರ ಇದನ್ನು ಗಮನಿಸಿ ಕೊರಟಗೆರೆ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವ ಭರವಸೆ ಇದೆ ಎಂದು ತಿಳಿಸಿದ ಅವರು ರೈತರು ಬೆಳೆದ ರಾಗಿಗೆ 2500 ರು., ಬತ್ತಕ್ಕೆ 1700 ರು., ಜೋಳಕ್ಕೆ 2 ಸಾವಿರ ರು.ಗಳಂತೆ ಪ್ರತಿ ಕ್ವಿಂಟಾಲ್ಗೆ ಬೆಂಬಲ ಬೆಲೆ ಸರ್ಕಾರ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ ಮಾತನಾಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಕೆ. ವೀರಕ್ಯಾತರಾಯ ಮಾತನಾಡಿ ಸರ್ಕಾರಗಳು ರೈತರನ್ನು ಮತವನ್ನಾಗಿ ಸೆಳೆಯುವ ಯೋಜನೆಗಳನ್ನು ರೂಪಿಸದೆ ವಿದ್ಯುತ್, ನೀರಾವರಿ, ಕಡಿಮೆ ಬೆಲೆಗೆ ರಸಗೊಬ್ಬರ ಹಾಗೂ ರೈತರ ಮಕ್ಕಳಿಗೆ ಶಿಕ್ಷಣ ನೀಡಿದರೆ ಸಾಕು, ರೈತರು ಇನ್ನೇನು ಕೇಳುವುದಿಲ್ಲ. ಆದ್ದರಿಂದ ರಾಜಕೀಯ ಪ್ರತಿನಿಧಿಗಳು ಇಚ್ಛಾಶಕ್ತಿಯನ್ನು ಇಟ್ಟುಕೊಂಡು ಕೆಲಸ ನಿರ್ವಹಿಸಬೇಕಿದೆ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷೆ ಅನಿತಾ, ಜಿ.ಪಂ.ಸದಸ್ಯೆ ದಾಕ್ಷಾಯಿಣಿ ರಾಜಣ್ಣ, ತಾ.ಪಂ.ಉಪಾಧ್ಯಕ್ಷೆ ಸಂಗೀತ, ಸದಸ್ಯರಾದ ಎಲ್.ವಿ. ಪ್ರಕಾಶ್, ಜಿ.ಎಲ್. ಹನುಮಂತರಾಯಪ್ಪ, ರವಿಕುಮಾರ್, ಜಯಮ್ಮ, ಬಸವರಾಜು, ತಾ.ಪಂ. ಇಓ ಮಂಜುನಾಥ್, ಕೃಷಿಕ ಸಮಾಜದ ಅಧ್ಯಕ್ಷ ಜಿ.ಕೆ.ಕುಮಾರ್, ಹನುಮಂತೇಗೌಡ, ಆಡಾಡಿ, ಕೃಷಿ ಇಲಾಖಾ ಅಧಿಕಾರಿಗಳಾದ ರಾಮಹನುಮಯ್ಯ, ಡಾ. ರವಿ, ರಾಘವೇಂದ್ರ, ಕೃಷಿ ವಿಜ್ಞಾನಿ ರಮೇಶ್, ಟಿ.ಕೆ. ವಿಜಯನರಸಿಂಹ ಸೇರಿದಂತೆ ಮತ್ತಿತರರು ಇದ್ದರು.