ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರೈತರ ಬೆಳೆಗೆ ಸದ್ಯದಲ್ಲೇ ವೈಜ್ಞಾನಿಕ ಬೆಲೆ

Rashmi Kasaragodu
Updated On : 25 Dec 2013, 2:03 am

ತಿಪಟೂರು: ಕೃಷಿ ಭೂಪರಿವರ್ತನೆ ಸೇರಿದಂತೆ ಕೃಷಿ ಭೂಮಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆಗಳು ಇಂದು ಕೃಷಿ ಇಳುವರಿ ಕಡಿಮೆಯಾಗಲು ಕಾರಣವಾಗಿದೆ. ಕೃಷಿಗೆ ಇತ್ತೀಚೆಗೆ ಹೆಚ್ಚಿನ ಕಂಟಕಗಳು ಒದಗಿ ಬಂದಿವೆ ಎಂದರೆ ಅವುಗಳಲ್ಲಿ ಕೈಗಾರಿಕೆಗಳು, ನಶಿಸುತ್ತಿರುವ ಗೋಸಂಪತ್ತೂ ಕಾರಣವಾಗಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
 ಪಟ್ಟಣದ ಎಪಿಎಂಸಿ ಅವರಣದಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ವಿಜ್ಞಾನ ಕೇಂದ್ರ ಸೇರಿದಂತೆ ಮತ್ತಿತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕೃಷಿ ಮಾಹಿತಿ ಆಂದೋಲನ ಮತ್ತು ರೈತರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರು ಬೆಳೆದ ಬೇಳೆಗಳಿಗೆ ಈವರೆಗೂ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಇದನ್ನು ಮನಗಂಡ  ಕಾಂಗ್ರೆಸ್ ಸರ್ಕಾರ ರೈತರಿಗೆ ಅಗತ್ಯವಾದ ವೈಜ್ಞಾನಿಕ ಬೆಲೆ ನೀಡುವ ಸಲುವಾಗಿ ಉನ್ನತ ಬೆಲೆ ನಿಗದಿ ಆಯೋಗವನ್ನು ರಚಿಸಿದ್ದು, ಸದಸ್ಯದಲ್ಲಿಯೇ ರೈತರು ಹಲವು ವರ್ಷಗಳ ಪ್ರಮುಖ ಬೇಡಿಕೆಯನ್ನು ಈಡೇರಿಸಲಾಗುವುದು. ಹಾಗೆಯೇ ಸರ್ಕಾರ ರೈತರ ಆರ್ಥಿಕ ಬೆಳವಣಿಗೆಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ದೇಶದ ದುರಂತ: ಉದ್ಘಾಟನೆ ನೆರವೇರಿಸಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಎಂ.ಕೆ. ಪ್ರಕಾಶ್ ಕೃಷಿ ಇಂದು ರೈತರಿಗೆ ನಷ್ಟದ ಕಸುಬಾಗಿರುವುದರಿಂದ ಹಳ್ಳಿಗಳೆಲ್ಲಾ ವೃದ್ಧಾಶ್ರಮವಾಗಿ ಮಾರ್ಪಾಡಾಗುತ್ತಿರುವುದು ದೇಶದ ದುರಂತವಾಗಿದೆ. ವಿದ್ಯಾವಂತರು ಸೇರಿದಂತೆ ಗ್ರಾಮೀಣ ಯುವಕರುಗಳು ಲಾಭದಾಯಕ ಉದ್ಯೋಗಗಳನ್ನು ಹರಸಿ ನಗರಗಳಿಗೆ ವಸಲೆ ಹೋಗುತ್ತಿದ್ದು, ಸರ್ಕಾರ ಮತ್ತು ಯುವ ರೈತರು ಈ ಬಗ್ಗೆ ಹೆಚ್ಚಿನ ಚಿಂತನೆ ನಡೆಸಬೇಕಾಗಿದೆ. ಇಂದು ಪಶುಸಂಗೋಪನೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರ ಕೈಗಳೇ ಮೇಲಾಗಿದ್ದು ನಶಿಸುತ್ತಿರುವ ಕೃಷಿ ಉಳಿವು ಮಹಿಳೆಯರಲ್ಲಿದ್ದು ಇದಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಹವಾಮಾನ ವೈಪರೀತ್ಯ: ಕೆವಿಕೆಯ ವಿಜ್ಞಾನಿಗಳಾದ ಡಾ. ಜಿ.ಎಂ. ಸುಜಿತ್ ಮತ್ತು ಡಾ.ಕೆ.ಆರ್. ಶ್ರೀನಿವಾಸ್ ರೈತರಿಗೆ ಮಾಹಿತಿ ನೀಡುತ್ತಾ ಕೃಷಿಯಿಂದ ಇತ್ತೀಚಿನ ದಿನಮಾನಗಳಲ್ಲಿ ರೈತರು ವಿಮುಖವಾಗುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ ಕೃಷಿಯ ಮೇಲೆ ನಿರಂತರವಾಗಿ ಹೆಚ್ಚುತ್ತಿರುವ ಹವಾಮಾನ ವೈಪರೀತ್ಯ ಪ್ರಮುಖವಾಗಿವೆ. ಅಂದರೆ ಕೃಷಿ ಕ್ಷೇತ್ರಕ್ಕೆ ಮಾತ್ರ ತೊಂದರೆ ಬರುತ್ತಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಏಳುಬೀಳುಗಳಿದ್ದು, ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಸುಲಭೋಪಾಯದಿಂದ ಪರಿಹರಿಸಿಕೊಳ್ಳಬೇಕು. ರೈತರಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಮಾಹಿತಿ ತಂತ್ರಜ್ಞಾನವನ್ನು ತಲುಪಿಸುವ ವ್ಯವಸ್ಥೆ ಇದ್ದು ಯುವ ರೈತರು ಈ ಬಗ್ಗೆ ತಿಳಿದು ಕೃಷಿಗೆ ಹೆಚ್ಚಿನ ಒತ್ತು ನೀಡಿದಲ್ಲಿ ಕೃಷಿ ನಿಜಕ್ಕೂ ಲಾಭದಾಯಕವಾಗಲಿದೆ ಎಂದರು. ಯುವ ರೈತರು ಭೂಮಿಗೆ ಹೆಚ್ಚಿನ ಸಾವಯವ ಪದಾರ್ಥಗಳನ್ನು ಭೂಮಿಗೆ ಸೇರಿಸಬೇಕಲ್ಲದೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ತಂತ್ರಜ್ಞರ ನಿರಂತರ ಸಂಪರ್ಕದಿಂದ ಕೃಷಿ  ಅವಲಂಬಿಸಿದಲ್ಲಿ ಕೃಷಿಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ವಿವರವಾಗಿ ತಿಳಿಸಿದರು.
 ತಾ. ಕೃಷಿ ಕ ಸಮಾಜದ ಅಧ್ಯಕ್ಷ ಕೆ.ಎಸ್. ದೇವರಾಜು, ತಾಲೂಕು ಕೃಷಿ ಕ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ಎಸ್. ಸದಾಶಿವಯ್ಯ, ತಾಲೂಕು ಪ್ರಭಾರ ಅಧ್ಯಕ್ಷ ರಾಜು ಮತ್ತು ಸಹಾಯಕ ಕೃಷಿ ಅಧಿಕಾರಿ ಜಯಪ್ಪ ಮಾತನಾಡಿ ರೈತರು ಮೂಲಕೃಷಿಗೆ ಹೆಚ್ಚು ಉತ್ತೇಜನ ನೀಡುವ ಮೂಲಕ ಸರ್ಕಾರದ ಸವಲತ್ತುಗಳನ್ನು ಬಳಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾಧಕ ಕೃಷಿಕರನ್ನು ಸನ್ಮಾನಿಸಲಾಯಿತು, ಕೆಲವೇ ಕೃಷಿ ಮಳಿಗೆಗಳನ್ನು ತೆರೆದಿದ್ದರೂ ಏನೊಂದೂ ಪ್ರಯೋಜನಕಾರಿಯಾಗಿಲ್ಲ ಎಂಬುದು ರೈತರ ಬಹಿರಂಗ ಆರೋಪವಾಗಿತ್ತು. ಸಮಾರಂಭದಲ್ಲಿ ಅಧಿಕಾರಿಗಳು, ತಾ.ಪಂ. ಮತ್ತು ಎಪಿಎಂಸಿ ಎಲ್ಲಾ ಸದಸ್ಯರು ಭಾಗವಹಿಸಿದ್ದರು.  ಶಿಕ್ಷಕಿ ಲೀಲಾವತಿ ಪ್ರಾರ್ಥಿಸಿ, ಜಲಾಯನ ಅಧಿಕಾರಿ ರಾಜಣ್ಣ ಸ್ವಾಗತಿಸಿ, ಮಹೇಶ್ ನೀಲಗಾರ್ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement