ಶಿಕ್ಷಕ ಒಬ್ಬ ಶ್ರೇಷ್ಠ ತ್ಯಾಗಮಯಿ: ಪ್ರಾಚಾರ್ಯ ನಾಗಪ್ಪ
ಶಿರಾ: ಜಾತಿ ಮತ, ಬಡವ ಬಲ್ಲಿದ ಅನ್ನುವ ಯಾವುದೇ ತಾರತಮ್ಯವಿಲ್ಲದೆ ಶಾಲೆಯೊಳಗಿನ ಎಲ್ಲಾ ಮಕ್ಕಳನ್ನು ತನ್ನವರೆಂದು ಭಾವಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುವ ಶಿಕ್ಷಕ ಒಬ್ಬ ಶ್ರೇಷ್ಠ ತ್ಯಾಗಮಯಿಯಾಗಿದ್ದಾನೆ ಎಂದು ಸಾಹಿತಿ ಚಿಕ್ಕನಹಳ್ಳಿ ಸರಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಎನ್.ನಾಗಪ್ಪ ತಿಳಿಸಿದರು.
ಅವರು ನಗರದಲ್ಲಿನ ಸ್ವಾತಂತ್ರ್ಯಪೂರ್ವದಲ್ಲೇ ಪ್ರಾರಂಭವಾಗಿದ್ದ ಜಿ.ಕೆ.ಎಂ.ಎಚ್.ಪಿ.ಬಿ.ಎಸ್. ಶಾಲೆಯಲ್ಲಿ ಸರ್ಕಾರಿ ಮಾಧ್ಯಮಿಕ ಪಾಠಶಾಲೆ ಹಾಗೂ ತಾಲೂಕು ಕಸಾಪ ವತಿಯಿಂದ ಏರ್ಪಡಿಸಿದ್ದ ಬೃಹತ್ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.
ಗುರುವಿನ ಪರಂಪರೆ ಎನ್ನುವುದು ಬಹುದೊಡ್ಡದು. ದೇಶದ ಉದ್ದಗಲಕ್ಕೂ ಗುರು ಪರಂಪರಗೆ ಗೌರವ ನೀಡಲಾಗುತ್ತಿದೆ ಎಂದ ಅವರು ಮಕ್ಕಳಿಗೆ ಮನೆಯೇ ಪ್ರಥಮ ಪಾಠಶಾಲೆ. ಆದರೂ ಶೈಕ್ಷಣಿಕವಾಗಿ ಮಕ್ಕಳ ಬುದ್ಧಿಶಕ್ತಿಗೆ ತಮ್ಮ ಶ್ರಮವನ್ನೆಲ್ಲಾ ದಾನ ಮಾಡುವ ಶಿಕ್ಷಕರನ್ನು ಗೌರವಿಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಬೇಕು ಎಂದರು.
ನಿವೃತ್ತಿಯ ನಂತರ ಶಿಕ್ಷಕ ನಿಜಕ್ಕೂ ನೀರಿನಿಂದ ತೆಗೆದ ಮೀನಾಗಿರುತ್ತಾನೆ. ಬರುವ ಅಲ್ಪ ಸಂಬಳದಲ್ಲಿ ಇಡೀ ಕುಟುಂಬವನ್ನು ಕಾಪಾಡುವ ಬಗ್ಗೆ ನಿವೃತ್ತ ಶಿಕ್ಷಕ ಚಿಂತೆಗೀಡಾಗುತ್ತಾನೆ. ಆದರೂ ತನ್ನ ಸೇವೆಯಲ್ಲಿ ಶಿಕ್ಷಕನಾದವ ಯಾವುದೇ ಲಂಚದ ಅಥವಾ ಆಮಿಷಕ್ಕೆ ಬಲಿಯಾಗಲಾರ ಶಾಲೆಯೊಳಗೆ ಭವಿಷ್ಯದ ಬಗ್ಗೆ ಚಿಂತಿಸುವ ಓರ್ವ ತಪಸ್ವಿ ಇದ್ದಂತೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಾಜ್ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಅನಿವಾರ್ಯವಾಗಿದ್ದು, ಅನಕ್ಷರತೆ ದೂರವಿಟ್ಟು ಅಕ್ಷರಸ್ಥರನ್ನಾಗಿಸುವತ್ತ ಚಿಂತಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಹಿಮಂತರಾಜು, ಕಸಾಪ ಅಧ್ಯಕ್ಷ ವೈ. ನರೇಶ್ಬಾಬು, ತಾಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ. ವಿನಯ್ಕುಮಾರ್, ಡಾ.ಎಸ್.ಪಿ. ಶಂಕರ್, ನಗರಸಭಾ ಸದಸ್ಯರಾದ ಶಾರದಾ ಶಿವಕುಮಾರ್, ಡಿ.ಮಂಜುನಾಥ್, ಟಿ.ಸಿ.ಬಿ. ನಿರ್ದೇಶಕ ಬಿ.ವಿ.ಪ್ರಭು, ಮುಖ್ಯ ಶಿಕ್ಷಕಿ ಗಾಯಿತ್ರಮ್ಮ ಮತ್ತಿತರರು ಹಾಜರಿದ್ದರು.
ಸನ್ಮಾನ: ನಿವೃತ್ತ ಶಿಕ್ಷಕರಾದ ಎನ್.ಕೆ. ಭೂತಯ್ಯ, ಕುಮಾರ ಸ್ವಾಮಿ, ಸಾವಿತ್ರಮ್ಮ, ಜಿ.ಎಸ್. ಮೂರ್ತಿ, ರಮೇಶಪ್ಪ, ಡಿ.ಬಿ.ರಾಜಮ್ಮ, ಪುಟ್ಟಮ್ಮ, ಶ್ರೀರಂಗಯ್ಯ ಶೆಟ್ಟರು, ವೀರಕ್ಯಾತಪ್ಪ, ಬಸವರಾಜಪ್ಪ, ಪ್ರಭಾಕರ ಶೆಟ್ಟಿ, ಜಿ.ಎಲ್.ರಾಮಣ್ಣ, ಇವರನ್ನು ಸನ್ಮಾನಿಸಲಾಯಿತು