ಬಿಜೆಪಿಯಿಂದ ಅಜಾತಶತ್ರು ಅಟಲ್ ಜನ್ಮದಿನಾಚರಣೆ
ಚಿಕ್ಕನಾಯಕನಹಳ್ಳಿ: ಭಾರತ ಕಂಡ ಅಪ್ರತಿಮ ದೇಶಭಕ್ತ ಮತ್ತು ರಾಜಕೀಯ ಮುತ್ಸದ್ದಿಯೆಂದರೆ ವಾಜಪೇಯಿ ಮಾತ್ರ ಎಂದು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ ನುಡಿದರು.
ಅವರು ಬುಧವಾರ ಪಟ್ಟಣದ ಬಾಲಕಿಯರ ವಸತಿ ನಿಲಯದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಹತ್ತು ವರ್ಷಗಳ ಹಿಂದೆ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಹೊಸ ದೃಷ್ಟಿಕೋನವನ್ನು ಹಾಕಿಕೊಟ್ಟ ಅವರು ತಮ್ಮ ವಿರೋಧಿಗಳನ್ನು ಸಹ ಅಪ್ಪಿತಪ್ಪಿಯು ಕಟುವಾಗಿ ಟೀಕಿಸಿದವರಲ್ಲ. ಪ್ರಪಂಚದ ದೊಡ್ಡಣ್ಣ ಅಮೆರಿಕ ವಿರೋಧದ ನಡುವೆಯು ಪೋಖ್ರಾನ್ ಅಣುಸ್ಫೋಟ ಮಾಡಿ ರಕ್ಷಣಾ ಕ್ಷೇತ್ರದಲ್ಲಿ ವಿಶ್ವಮಟ್ಟಕ್ಕೆ ಭಾರತ ಕೀರ್ತಿಯನ್ನು ಬೆಳಗಿಸಿದರು. ಅವರ ಕಾಲದ ದೂರಸಂಪರ್ಕ ಕ್ರಾಂತಿ, ದೇಶದ ಉದ್ದಗಲಕ್ಕೂ ಚಾಚಿರುವ ಚತುಷ್ಪಥ ರಸ್ತೆ ಮುಂತಾದವು ಅವರನ್ನು ಭಾರತದ ರಾಜಕೀಯ ಇತಿಹಾಸದಲ್ಲಿ ಅಜರಾಮರರನ್ನಾಗಿಸಿವೆ ಎಂದರು.