ಸಮಾಜಕ್ಕೆ ಹಿರಿಯರ ಸಲಹೆ ಸಹಕಾರ ಅಗತ್ಯ
ಶಿರಾ: ದೇಶದ ಸದೃಢತೆ ಹಾಗೂ ಅಭಿವೃದ್ಧಿಗಾಗಿ ಸಮಾಜಕ್ಕೆ ಹಿರಿಯರ ಸಲಹೆ ಸಹಕಾರಗಳು ಅಗತ್ಯವಾಗಿವೆ ಎಂದು ಮುಖ್ಯೋಪಾಧ್ಯಾಯಿನಿ ಬಿ.ಡಿ.ಮಂಜುಳ ತಿಳಿಸಿದರು.
ಅವರು ನಗರದ ಪ್ರೆಸಿಡೆನ್ಸಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರಿಕರ ಸ್ನೇಹ ಸಮಾರಂಭ ಹಾಗೂ ಅಜ್ಜ-ಅಜ್ಜಿಯರ ಅವಶ್ಯಕತೆ ಈಗಿನ ಮೊಮ್ಮಕ್ಕಳಿಗೆ ಇದೆಯಾ ಎಂಬ ವಿಶೇಷ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಹಿಂದೆ ಹಿರಿಯ ನಾಗರಿಕರು ನೀಡಿದ ಸಲಹೆ ಮಾರ್ಗದರ್ಶನಗಳೆ ಇಂದಿನ ದೇಶದ ಅಭಿವೃದ್ಧಿಗೆ ಸಾಧನವಾಗಿದ್ದು, ವೈಜ್ಞಾನಿಕ ಯುಗದಲ್ಲಿ ಬೆಳೆಯುತ್ತಿರುವ ಇಂದಿನ ಮಕ್ಕಳಿಗೆ ಅಜ್ಜ-ಅಜ್ಜಿಯರ ಮಾನವೀಯ ನಿರ್ದೇಶನ ಅಗತ್ಯವಿದೆ ಎಂದರು.
ಸಮಾರಂಭದಲ್ಲಿ ಹಿರಿಯ ನಾಗರಿಕರಾದ ಷರೀಫ್ ಮಾಸ್ಟರ್, ನಾಗೇಂದ್ರಪ್ಪ, ನಾಗರಾಜು, ಬಾನು, ಮತ್ತಿತರರು ಮಾತನಾಡಿ ನಿಜಕ್ಕೂ ಹಿರಿಯ ನಾಗರಿಕರನ್ನು ಅವರ ಮನೆಯಲ್ಲಿ ಆತ್ಮತೃಪ್ತಿ ತಂದಿದೆ ಎಂದರು.
ಸಮಾರಂಭದಲ್ಲಿ ನಿವೃತ್ತ ಮಿಲಿಟರಿ ಅಧಿಕಾರಿ ನಾಗರಾಜು ಸ್ವಾಗತಿಸಿ, ಚಂದ್ರಹಾಸ ನಿರೂಪಿಸಿದರು. ಗೀತಾ ವಂದಿಸಿದರು. ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚಿನ ಹಿರಿಯ ಜೋಡಿಗಳು ಶಾಲಾ ಮಕ್ಕಳು ಪಾಲಕರು ಹಾಜರಿದ್ದರು.