'ಸಾಂಸ್ಕೃತಿಕ ರಾಯಭಾರಿಯಾಗಿದ್ದ ಶಿವಕುಮಾರನಾಥ ಸ್ವಾಮೀಜಿ'
ತುರುವೇಕೆರೆ: ತಾಲೂಕಿನ ಕಾಲಭೈರವೇಶ್ವರ ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿಯವರ ಅಕಾಲಿಕ ನಿಧನದಿಂದಾಗಿ ಜಿಲ್ಲೆಯೇ ಓರ್ವ ಸಾಂಸ್ಕೃತಿಕ ಹಾಗೂ ಧಾರ್ಮಿಕ ರಾಯಭಾರಿಯನ್ನು ಕಳೆದುಕೊಂಡಂತೆ ಆಗಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಮಾಯಸಂದ್ರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಆರ್.ಜಯರಾಂ ಹೇಳಿದರು.
ಮಾಯಸಂದ್ರದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಶ್ರೀಗಳು ಮಠಕ್ಕೆ ಬರುವ ಪ್ರತಿಯೊಬ್ಬ ಭಕ್ತರನ್ನೂ ಗೌರವದಿಂದ ಕಾಣುತ್ತಿದ್ದರು. ಬಡವ ಶ್ರೀಮಂತ ಎಂಬ ಭೇದ ಭಾವ ಮಾಡದೇ ಸರ್ವರನ್ನೂ ಸಮಾನವಾಗಿ ಕಾಣುತ್ತಿದ್ದರು ಎಂದರು. ಸಜ್ಜನಿಕೆಯಿಂದಲೇ ಅಪಾರ ಭಕ್ತವೃಂದವನ್ನು ಹೊಂದಿದ್ದರು. ಇವರ ಮಾರ್ಗದರ್ಶನದಿಂದ ಹಲವಾರು ಸಂಘ ಸಂಸ್ಥೆಗಳು ಬಹಳ ಪ್ರವರ್ಧಮಾನಕ್ಕೆ ಬೆಳೆದಿದ್ದವು ಎಂದು ಜಯರಾಂ ಹೇಳಿದರು.
ನಿವೃತ್ತ ಪ್ರಾಂಶುಪಾಲ ಕೆ. ಭೈರಪ್ಪ, ಸ್ವಾತಂತ್ರ್ಯ ಹೋರಾಟಗಾರ ಎಂ.ಎಚ್.ನರಸಿಂಹಯ್ಯ, ಪಿ.ಎಲ್.ಕೆಂಪೇಗೌಡ, ಪಟೇಲ್ ಬಿ.ಲಿಂಗಪ್ಪ ಮೊದಲಾದವರು ಶ್ರೀಗಳ ಗುಣಗಾನ ಮಾಡಿದರು. ತಾ.ಪಂ.ಮಾಜಿ ಅಧ್ಯಕ್ಷ ಎಂ.ವಿ.ಕುಮಾರ್, ನಿವೃತ್ತ ಶಿಕ್ಷಕ ಶಿವರಾಮ್, ಶಿಕ್ಷಕರಾದ ಪ್ರಕಾಶ್, ಮುಖಂಡರಾದ
ಬ್ಯಾಡರಹಳ್ಳಿ ದೇವರಾಜು, ಲೀಲಾವತಿ ಗಿಡ್ಡಯ್ಯ, ಎನ್.ಸಿ.ನಂಜುಂಡಸ್ವಾಮಿ, ಹೊನ್ನೇಗೌಡ ಮೊದಲಾದವರು ಭಾಗವಹಿಸಿದ್ದರು.