'ಎನ್ಎಸ್ಎಸ್ ಮಹತ್ವದ ಪಾತ್ರ'
ಕ.ಪ್ರ.ವಾರ್ತೆ ಮಧುಗಿರಿ ಡಿ.26
ಶೈಕ್ಷಣಿಕವಾಗಿ ರಾಷ್ಟ್ರೀಯ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿ ಬೆಳೆಸುವ ನಿಟ್ಟಿನಲ್ಲಿ ಎನ್ಎಸ್ಎಸ್ ಮಹತ್ವದ ಪಾತ್ರ ವಹಿಸಲಿದೆ ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷ ಹಾಗೂ ಉಪನ್ಯಾಸಕ ಎನ್. ಮಹಾಲಿಂಗೇಶ್ ನುಡಿದರು.
ಮಧುಗಿರಿ ತಾಲೂಕಿನ ದಬ್ಬೇಘಟ್ಟ ಸರ್ಕಾರಿ ಪಪೂ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ 2013-14ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಬಡಿಗೊಂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಎನ್ಎಸ್ಎಸ್ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸೇವೆ ವ್ಯಕ್ತಿಯನ್ನು ಉದಾತ್ತನನ್ನಾಗಿಸುತ್ತದೆ. ನಾವು ಎಲ್ಲರಿಗಾಗಿ ಎಂಬ ವಿಶಾಲವಾದ ಮನೋಭಾವನೆ ಬೆಳೆಸಿ ಕೊಳ್ಳಬೇಕು. ಗ್ರಾಮೀಣ ಭಾರತದ ಪ್ರಗತಿ ದೇಶದ ಅಭಿವೃದ್ಧಿ ಎಂಬುದನ್ನು ಮನಗಾಣಬೇಕು. ವಿದ್ಯಾರ್ಥಿಗಳು ಎನ್ಎಸ್ಎಸ್ ಶಿಬಿರದಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಹಕಾರಿ ಎಂದ ಮಹಾಲಿಂಗೇಶ್, ಭವಿಷ್ಯದಲ್ಲಿ ಶೈಕ್ಷಣಿಕವಾಗಿ ಹೆಚ್ಚು ಸಹಾಯವಾಗಲಿದ್ದು ಸುಂದರ ಜೀವನ ನಡೆಸಲು ಎನ್ಎಸ್ಎಸ್ ಪ್ರೇರಣೆ ನೀಡುತ್ತದೆ ಎಂದರು.
ಎನ್ಎಸ್ಎಸ್ ಅಧಿಕಾರಿ ಲಿಂಗಯ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭದಲ್ಲಿ ಪ್ರಾಂಶುಪಾಲ ಕೆ. ಕೃಷ್ಣಸ್ವಾಮಿ, ಮುಖ್ಯ ಶಿಕ್ಷಕಿ ರಂಗಮ್ಮ, ಬಡವನಹಳ್ಳಿ ಎಎಸೈ ವೆಂಕಟೇಶಪ್ಪ, ಉಪನ್ಯಾಸಕರಾದ ರಂಗಪ್ಪ, ಈಶ್ವರಯ್ಯ, ಪರಮೇಶ್ವರ್, ವಿಜಯ್ಕುಮಾರ್ ಅನೇಕರು ಉಪಸ್ಥಿತರಿದ್ದರು.