ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಏಕರೂಪ ಸಮಾನ ಶಿಕ್ಷಣ ನೀತಿಗೆ ಆಗ್ರಹಿಸಿ ಸಹಿ ಸಂಗ್ರಹ

Rashmi Kasaragodu
Updated On : 27 Dec 2013, 1:55 am

ತುಮಕೂರು: ಏಕರೂಪ ಸಮಾನ ಶಿಕ್ಷಣ ನೀತಿಗೆ ಒತ್ತಾಯಿಸಿ ಮುಂಬರುವ ದಿನಗಳಲ್ಲಿ ಜಯಕರ್ನಾಟಕ ಸಂಘಟನೆಯು ರಾಜ್ಯಾದ್ಯಂತ ಸಹಿ ಸಂಗ್ರಹ ಚಳವಳಿ ಹಮ್ಮಿಕೊಂಡಿರುವುದಾಗಿ ಜಯಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎನ್. ದೀಪಕ್ ತಿಳಿಸಿದರು.
ಅವರು ತಾಲೂಕಿನ ಊರುಕೆರೆ ಗ್ರಾಮದಲ್ಲಿ ಜಯಕರ್ನಾಟಕ ಗ್ರಾಮಾಂತರ ಶಾಖೆ ಆಯೋಜಿಸಿದ್ದ 5ನೇ ವರ್ಷದ ಕನ್ನಡದ ಹಬ್ಬವನ್ನು ಉದ್ಘಾಟಿಸಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದರು.
ರಾಜ್ಯದ್ಯಂತ ಏಕರೂಪ ಶಿಕ್ಷಣ ನೀತಿ ಜಾರಿಗೊಳಿಸುವಂತೆ ಒತ್ತಾಯಿಸಿ ಜಯಕರ್ನಾಟಕ ಸಂಘಟನೆಯ ಶಿಕ್ಷಣ ತೇರು ಕಾರ್ಯಕ್ರಮ ಆಯೋಜಿಸಿ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಗಮನ ಸೆಳೆದಿದೆ. ಇದರ ಮುಂದಿನ ಭಾಗವಾಗಿ ಸಹಿ ಸಂಗ್ರಹ ಚಳುವಳಿ ಹಮ್ಮಿಕೊಂಡು ಸಮಾನ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸರ್ಕಾರವನ್ನು ಆಗ್ರಹಿಸುವುದಾಗಿ ಹೇಳಿದರು.
ಪ್ರಸಕ್ತ ರಾಜ್ಯದಲ್ಲಿ 8 ಬಗೆಯ ಶಿಕ್ಷಣ ಪದ್ಧತಿ ಚಾಲ್ತಿಯಲ್ಲಿದೆ. ಜನಪ್ರತಿನಿಧಿಗಳು ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಿಗೆ ಮಣಿದು ಶಿಕ್ಷಣವನ್ನು ಮಾರಾಟದ ಸರಕಾಗಿಸಿದ್ದಾರೆ. ಇದರಿಂದ ಶಿಕ್ಷಣ ಉಳ್ಳವರ ಸ್ವತ್ತಾಗುತ್ತಿದ್ದು ಗ್ರಾಮೀಣ ಪ್ರದೇಶದ ಬಡ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಜಯಕರ್ನಾಟಕ ಸಂಘಟನೆ ಹಮ್ಮಿಕೊಂಡಿರುವ ಚಳವಳಿಗೆ ನಾಡಿನ ಜನತೆ ಸಹಕಾರ ನೀಡಬೇಕೆಂದರು.
ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಬೆಳ್ಳಿ ಲೋಕೇಶ್ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ರಾಜ್ಯೋತ್ಸವ ಕಾರ್ಯಕ್ರಮಗಳು ಆಡಂಬರದ ಸ್ವರೂಪ ಪಡೆಯುತ್ತಿದ್ದು ಇವು ಅರ್ಥಪೂರ್ಣ ಆಚರಣೆಗಳಾಗಬೇಕು. ಜಯಕರ್ನಾಟಕ ಸಂಘಟನೆ ಆ ನಿಟ್ಟಿನಲ್ಲಿ ಸಕ್ರೀಯವಾಗಿ ಕೆಲಸ ನಿರ್ವಹಿಸುತ್ತಿದ್ದು ಈ ಸಂಘಟನೆಯ ಕಾರ್ಯಚಟುವಟಿಕೆ ಹೀಗೆ ಮುಂದುವರಿಯಲಿ ಎಂದು ಆಶಿಸಿದರು.
ಜಯಕರ್ನಾಟಕ ಜಿಲ್ಲಾಧ್ಯಕ್ಷ ರಂಜನ್, ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ್, ಗ್ರಾಮಾಂತರ ಅಧ್ಯಕ್ಷ ಅನಿಲ್ ನಾಯಕ್, ಪ್ರಧಾನ ಕಾರ್ಯದರ್ಶಿ ರಘು, ಅನಿಲ್, ಮಾಜಿ ಗ್ರಾ.ಪಂ. ಸದಸ್ಯೆ ಪದ್ಮ,  ಸುರೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement