'ಜಿಎಸ್ಎಸ್ ಜಾತ್ಯತೀತ ವ್ಯಕ್ತಿ'
ಕ.ಪ್ರ.ವಾರ್ತೆ ತುಮಕೂರು ಡಿ.26
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಜಾತ್ಯತೀತ ವ್ಯಕ್ತಿತ್ವದಿಂದಾಗಿಯೇ ರಾಷ್ಟ್ರಕವಿ ಪ್ರಶಸ್ತಿಗೆ ಪಾತ್ರರಾದವರು ಎಂದು ಸಾಹಿತಿ ವಡ್ಡಗೆರೆ ನಾಗರಾಜಯ್ಯ ಅಭಿಪ್ರಾಯಪಟ್ಟರು.
ಅವರು ನಗರದ ಸರಸ್ವತಿಪುರಂ ವಿವೇಕಾನಂದ ಕಾಲೇಜಿನಲ್ಲಿ ನಡೆದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾತಿಯ ಮಲಿನವಿಲ್ಲದೆ ಕರ್ನಾಟಕದ ಅನೇಕ ಸಾಂಸ್ಕೃತಿಕ ಸಂಸ್ಥೆಗಳನ್ನು ಕಟ್ಟಿದವರು ಶಿವರುದ್ರಪ್ಪನವರು ಎಂದು ಬಣ್ಣಿಸಿದರು.
ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್ ಮಾತನಾಡಿ ಜಿ.ಎಸ್. ಶಿವರುದ್ರಪ್ಪನವರು ಕರ್ನಾಟಕದ ಅನೇಕ ಸಾಮಾಜಿಕ ಸಂಘಟನೆಗಳು ಮತ್ತು ಹೋರಾಟಗಾರರಿಗೆ ಬೆನ್ನೆಲುಬಾಗಿದ್ದವರು. ಕುವೆಂಪು ಅವರ ವೈಚಾರಿಕತೆಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿದ ಶ್ರೇಷ್ಠ ವ್ಯಕ್ತಿತ್ವ ಎಂದರು.
ದಲಿತ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಬಂದಕುಂಟೆ ನಾಗರಾಜಯ್ಯ ಮಾತನಾಡಿ ಕರ್ನಾಟಕ ದಲಿತ, ಬಂಡಾಯ ಚಳವಳಿ, ರೈತ ಚಳವಳಿ, ಮಹಿಳಾ ಚಳವಳಿ ಮುಂತಾದ ಅನೇಕ ಚಳವಳಿಗಳ ಸಾಕ್ಷಿ ಪ್ರಜ್ಞೆಯಾಗಿದ್ದ ಜಿ.ಎಸ್ಎಸ್ ಬದುಕು ಮತ್ತು ಬರೆಹದಲ್ಲು ಸಮಾನತೆ ಕಾಯ್ದುಕೊಂಡವರು ಎಂದರು. ಹೊನ್ನುಡಿಕೆ ಜಿ.ಪಂ. ಸದಸ್ಯ ರಾಮಚಂದ್ರಪ್ಪ, ಕುರುಬರ ಯುವ ವೇದಿಕೆಯ ಸಿ.ಆರ್. ಜಯರಾಮು ಇದ್ದರು.