ತುರುವೇಕೆರೆ ಸತ್ಯಗಣಪತಿ ವಿಸರ್ಜನೆ
ತುರುವೇಕೆರೆ: ತಾಲೂಕಿನ ಪ್ರಸಿಧ್ಧ ಶ್ರೀ ಸತ್ಯಗಣಪತಿಯನ್ನು ವೈಭವಯುತವಾಗಿ ಪಟ್ಟಣದ ಸಂತೆ ಮೈದಾನದ ಬಳಿಯ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಸತ್ಯಗಣಪತಿ ಆಸ್ಥಾನ ಮಂಟಪದಿಂದ ಹೊರಟ ಗಣಪತಿಯ ಮೆರವಣಿಗೆ ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಸಂಚರಿಸಿತು. ಗ್ರಾಮಸ್ಥರು ತಮ್ಮ ಮನೆ ಹಾಗೂ ಬಡಾವಣೆಯನ್ನು ತಳಿರು ತೋರಣಗಳಿಂದ ಶೃಂಗರಿಸಿದ್ದರು. ಸಾಯಂಕಾಲ ಪಟ್ಟಣ ಪಂಚಾಯ್ತಿ ಮುಂಭಾಗ ಮೆರವಣೆಗೆ ಬಂದ ವೇಳೆ ಅಲ್ಲಿನ ವ್ಯಾಪಾರಸ್ಥರು ವಿಶೇಷ ಪೂಜೆಯನ್ನು ಮಾಡಿ ಬೃಹದಾಕಾರದ ಹೂವಿನ ಮಾಲೆಯನ್ನು ಗಣಪತಿಗೆ ಅರ್ಪಿಸಿದರು. ಭಾರಿ ಸಿಡಿ ಮದ್ದಿನ ಪ್ರದರ್ಶನವನ್ನೂ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಬಂದ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗವನ್ನೂ ಮಾಡಿಸಿದ್ದರು.
ಗಣಪತಿಯನ್ನು ಭಕ್ತರ ಜಯಘೋಷಗಳೊಂದಿಗೆ ತೆಪ್ಪದ ಮೇಲೆ ಕೂರಿಸಲಾಯಿತು. ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ತೆಪ್ಪದಲ್ಲಿ ಗಣಪತಿಯನ್ನು ಕೂರಿಸಿ ಕೆರೆಯ ಮಧ್ಯ ಭಾಗದಲ್ಲಿ ವಿಸರ್ಜಿಸಲಾಯಿತು. ಆ ವೇಳೆ ವಿಶೇಷವಾದ ಸಿಡಿಮದ್ದಿನ ಪ್ರದರ್ಶನವನ್ನು ಮಾಡಲಾಯಿತು. ಶಿವಶಕ್ತಿ ತಂಡದವರಿಂದ ಕೀಲು ಕುದುರೆ, ನಯ್ಯಾಂಡಿ ನೃತ್ಯ, ಕರಗ ನೃತ್ಯ, ಗಣೇಶನ ಕುಣಿತ, ನವಿಲಿನ ಕುಣಿತ, ಬಸವನ ಕುಣಿತ, ಗರುಡನ ಕುಣಿತ, ಕಾವಡಿ, ವೀರಗಾಸೆ, ಪೂಜಾ ಕುಣಿತ, ಹಾಗೂ ರೋಡ್ ಆರ್ಕೆಸ್ಟ್ರಾ ವನ್ನು ಏರ್ಪಡಿಸಲಾಗಿತ್ತು. ವಿವಿಧ ಗ್ರಾಮಗಳಿಂದ ಸಾವಿರಾರು ಮಂದಿ ವಿಸರ್ಜನಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ (ರಾಜು), ಕಾರ್ಯದರ್ಶಿ ನಾಗರಾಜು, ಸಹ ಕಾರ್ಯದರ್ಶಿ ನಟರಾಜು, ಸದಸ್ಯರುಗಳಾದ ನರಸಿಂಹಯ್ಯ, ಚಂದ್ರು, ಟಿ.ಎನ್.ಸತೀಶ್ ಮೊದಲಾದವರು ವಿಸರ್ಜನಾ ಮಹೋತ್ಸವದ ನೇತೃತ್ವ ವಹಿಸಿದ್ದರು.