ದೇವರಕೊಪ್ಪಲು ಗ್ರಾಮದಲ್ಲಿ ರೈತ ದಿನಾಚರಣೆ
ಆಲೂರು: ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನ ಕೃಷಿಯನ್ನು ಅವಲಂಬಿಸಿರುವುದರಿಂದ ಆಹಾರ ಕೊರತೆ ನಿವಾರಣೆಯಾಗುತ್ತಿದೆ ಎಂದು ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಚನ್ನಕೇಶವ ತಿಳಿಸಿದರು. ಕಸಬಾ ದೇವರಮನೆಕೊಪ್ಪಲು ಗ್ರಾಮದಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ ಮಾಜಿ ಪ್ರಧಾನಿ ದಿ. ಚೌಧರಿ ಚರಣ್ಸಿಂಗ್ ಹುಟ್ಟು ಹಬ್ಬದ ಅಂಗವಾಗಿ ಆತ್ಮ ಯೋಜನೆಯಡಿ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಭಾರತ ಶೇ. 60 ರಷ್ಟು ಹಳ್ಳಿ ಗಳನ್ನು ಹೊಂದಿರುವ ದೇಶವಾಗಿದ್ದು, ಹಳ್ಳಿಗಳಲ್ಲಿ ವಾಸಿಸುವ ಬಹುತೇಕ ಜನರು ಕೃಷಿಯಲ್ಲಿ ತೊಡಗಿದ್ದಾರೆ. ಚರಣಸಿಂಗ್ ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಜಮೀನ್ದಾರಿ ನಿರ್ಮೂಲನೆ ಕಾಯಿದೆ ರೂಪಿಸಿ ಕಾರ್ಯಗತ ಗೊಳಿಸಿದರು ಎಂದು ತಿಳಿಸಿದರು.
ಇಂದು ವಾರ್ಷಿಕ ಕ್ರೀಡಾಕೂಟ
ಹಾಸನ: ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಡಿ. 27ರಂದು ಬೆಳಗ್ಗೆ 8ಕ್ಕೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಲಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎಸ್. ಸೋಮಶೇಖರ್ ಉದ್ಘಾಟಿಸುವರು. ಸಮಾರೋಪ ಸಮಾರಂಭ ಡಿ. 29ರಂದು ಸಂಜೆ 4 ಕ್ಕೆ ನಡೆಯಲಿದ್ದು ಮೈಸೂರು ದಕ್ಷಿಣ ವಲಯದ ಮಹಾ ನಿರೀಕ್ಷಕ ಡಾ.ಕೆ.ರಾಮಚಂದ್ರರಾವ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕುಂದು ಕೊರತೆ ಸಮಿತಿ ಸಭೆ ಇಂದು
ಹಾಸನ: ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ವರ್ಗದ ಕುಂದು ಕೊರತೆ ಸಮಿತಿ ಸಭೆಯು ಜಿಲ್ಲಾಧಿಕಾರಿ ಅನ್ಬುಕುಮಾರ್ ಅಧ್ಯಕ್ಷತೆಯಲ್ಲಿ ಡಿ. 27ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಸಭಾಂಗಣದಲ್ಲಿ ನಡೆಯಲಿದೆ.
ಅರಸೀಕೆರೆ ತಾ.ನಲ್ಲಿ ವಿದ್ಯುತ್ ಇಲ್ಲ
ಅರಸೀಕೆರೆ: ತುರ್ತು ವಿದ್ಯುತ್ ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅರಸೀಕೆರೆ ತಾಲೂಕಿನ ಹಲವೆಡೆ ಡಿ.27 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇಂದು ಆರಾಧನೆ
ತುಮಕೂರು: ಇಲ್ಲಿನ ಶಂಕರಮಠದಲ್ಲಿ ಡಿ.27 ರಂದು ಬ್ರಹ್ಮ ಚೈತನ್ಯ ಮಹಾರಾಜ್ ಗೋಂದಾವಲೇಕರ್ ಅವರ ಆರಾಧನಾ ಶತಮಾನೋತ್ಸವ ಮತ್ತು ಟ್ರಸ್ಟಿನ ರಜನ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಸಚ್ಚಿದಾನಂದ ಅದ್ವೈತಾಶ್ರಮ ಟ್ರಸ್ಟ್ ಅಧ್ಯಕ್ಷ ಅದ್ವಯಾನಂದೇಂದ್ರ ಸರಸ್ವತಿ ಸ್ವಾಮಿಗಳು ಮತ್ತು ಪಾವಗಡ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಸ್ವಾಮಿ ಜಪಾನಂದಜೀ ಸಾನಿಧ್ಯ ವಹಿಸುವರು. ಶಿರಾದ ರಾಘವೇಂದ್ರ ಸ್ವಾಮಿ ಮಠದ ಸಂಸ್ಥಾಪಕ ಸಿ.ಎನ್. ಶ್ಯಾಮಾ ಜೋಯಿಸ್, ನಗರಸಭಾ ಸದಸ್ಯ ಎನ್.ಆರ್. ನಾಗರಾಜರಾವ್ ಅತಿಥಿಗಳಾಗಿದ್ದು ಶಂಕರಮಠದ ಶಂಕರ ಸೇವಾ ಸಮಿತಿ ಅಧ್ಯಕ್ಷ ಎಸ್. ಶಂಕರ ಅಧ್ಯಕ್ಷತೆ ವಹಿಸುವರು ಎಂದು ಟ್ರಸ್ಟ್ನ ಅಧ್ಯಕ್ಷ ಶ್ರೀನಿವಾಸ ಶರ್ಮ ತಿಳಿಸಿದ್ದಾರೆ. ಡಿಸೆಂಬರ್ 27 ರಂದು ಬೆಳಿಗ್ಗೆ 5 ಗಂಟೆಗೆ ಕಾಕಡಾರತಿ, ಗುರುಪೂಜೆ, ಪಾದುಕಾ ಆಗಮನ, ಪೂರ್ಣಕುಂಭ ಸ್ವಾಗತ, 8.30 ಕ್ಕೆ ಕಳಶ ಸ್ಥಾಪನೆ, ಹೋಮ, ಭಜನೆ ನಡೆಯಲಿದೆ.
ಹಾಡಹಗಲೇ ಕಳವು
ಚನ್ನರಾಯಪಟ್ಟಣ: ಪಟ್ಟಣದ ನಾಗಸಮುದ್ರ ರಸ್ತೆಯಲ್ಲಿರುವ ಅಕ್ಷರ ದಾಸೋಹ ಅಧಿಕಾರಿ ರವಿಶಂಕರ್ ಎಂಬುವರ ಮನೆಯಲ್ಲಿ ಗುರುವಾರ ಹಾಡಹಗಲೇ ಕಳವು ಮಾಡಲಾಗಿದೆ. ಮನೆಯ ಮುಂಭಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು 45 ಗ್ರಾಂ ಚಿನ್ನಾಭರಣ ಮತ್ತು ಲ್ಯಾಪ್ಟ್ಯಾಪ್ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಎಂದಿನಂತೆ ರವಿಶಂಕರ್ ದಂಪತಿ ಮನೆಗೆ ಸಂಜೆ ಹಿಂತಿರುಗಿದಾಗ ಕಳವು ಮಾಡಿರುವುದು ತಿಳಿಯಿತು.