ಬಂದದ್ದನ್ನೆಲ್ಲಾ ನಗುನಗುತ್ತಲೇ ನಿಭಾಯಿಸಿ: ಡಾ.ಅಹಲ್ಯ
ತುರುವೇಕೆರೆ: ಎಲ್ಲಾ ಚಿಂತೆಯನ್ನು ಬದಿಗೊತ್ತಿ. ನಗುನಗುತ್ತಾ ಬಂದಿರುವ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ ಆಗ ನೀವು ಉತ್ತಮ ಜೀವನ ನಡೆಸಲು ಸಾಧ್ಯ...
ಹೀಗೆ ನವಿರಾಗಿ ತಮ್ಮೆದುರಿಗೆ ಕುಳಿತವರಿಗೆ ಹಲವಾರು ಅನುಭವಗಳ ಮೂಲಕ ವಿವರಿಸಿದವರು ಬೆಂಗಳೂರಿನ ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರೊ. ಡಾ.ಅಹಲ್ಯ.
ಸ್ಥಳೀಯ ಚಿದಂಬರೇಶ್ವರ ಉಚಿತ ಗ್ರಂಥಾಲಯ ತನ್ನ 3 ನೇ ವರ್ಷದ ತಿಂಗಳಿಗೊಂದು ಪುಸ್ತಕ ಪರಿಚಯ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮೈಸೂರು ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಡಾ. ಶ್ರೀವತ್ಸ ಅವರು ರಚಿಸಿರುವ ಆಯುರ್ವೇದ ಎಲ್ಲರಿಗಾಗಿ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿದ ಸಂಧರ್ಭದಲ್ಲಿ ಆಯುರ್ವೇದದಿಂದ ಜನರಿಗಾಗುವ ಅನುಕೂಲಗಳ ಬಗ್ಗೆ ತಿಳಿಸಿದರು.
ನೀವೆಲ್ಲರೂ ಆರೋಗ್ಯದಿಂದ ಇರಬೇಕು ಎಂದಾದಲ್ಲಿ ತಂಗಳು ಪೆಟ್ಟಿಗೆ ( ಫ್ರಿಡ್ಜ್) ಹಾಗೂ ಮೂರ್ಖರ (ಟಿ ವಿ ) ಪೆಟ್ಟಿಗೆಯಿಂದ ದೂರವಿರಿ ಎಂದೇ ತಮ್ಮ ಮಾತು ಪ್ರಾರಂಭಿಸಿದ ಆಯುರ್ವೇದ ಪ್ರಾಧ್ಯಾಪಕ ಡಾ. ಶ್ರೀವತ್ಸ ಮಿತವಾದ ಆಹಾರ ಸೇವನೆ ಮಾಡಿ ನೆಮ್ಮದಿಯಿಂದ ವಿಹಾರ ಮಾಡಿ ಹಲವಾರು ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡುತ್ತಿದ್ದರೆ ಆರೋಗ್ಯವೆಂಬುದು ನಿಮ್ಮದಾಗೇ ಇರುತ್ತದೆ ಎಂದರು.
ತುಮಕೂರು ವಿವಿ ಮಾಜಿ ಕುಲಪತಿಗಳಾಗಿದ್ದ ಡಾ.ಎಸ್.ಸಿ.ಶರ್ಮ ಅವರು ಪ್ರತಿ ತಿಂಗಳು ಪುಸ್ತಕ ಪರಿಚಯ ಎಂಬ ಕಾರ್ಯಕ್ರಮದ ರೂವಾರಿಗಳಾಗಿರುವ ಲಲಿತಾ ರಾಮಚಂದ್ರು ಅವರ ಸೇವೆಯನ್ನು ಶ್ಲಾಘಿಸಿದರು.
ಚಿದಂಬರೇಶ್ವರ ಗ್ರಂಥಾಲಯದ ಅಧ್ಯಕ್ಷ ಜಿ.ಎನ್.ಲಕ್ಷ್ಮೀನಾರಾಯಣರಾವ್ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪುಸ್ತಕಗಳ ಪರಿಚಯ ಮಾಡಿಕೊಟ್ಟ ಎಂ.ಆರ್.ಶೇಷಾದ್ರಿ ಮೋಕ್ಷಗುಂಡಂ, ವಕೀಲ ಡಿ.ಟಿ.ರಾಜಶೇಖರ್, ಉಪನ್ಯಾಸಕ ಎಂ.ಎನ್.ಮಹದೇವ್, ಗ್ರಂಥಪಾಲಕ ತಂ.ಪಾ.ಚಂದ್ರಕೀರ್ತಿ, ಉಪನ್ಯಾಸಕ ಯೋಗಾನಂದ್, ಡಾ.ಎ.ನಾಗರಾಜು, ಜಿ.ಎನ್. ನರಸಿಂಹಮೂರ್ತಿ, ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಸ್.ಸೊಪ್ಪಿನ, ಉಪನ್ಯಾಸಕಿ ಕೆ.ಆರ್.ಅಶ್ವಿನಿ ಪ್ರಭುಸ್ವಾಮಿ, ಡಾ.ಪ್ರದೀಪ್ ಕುಮಾರ್ ಹೆಬ್ರಿ, ವಿದ್ಯಾರ್ಥಿಗಳಾದ ಬಿ.ಎನ್.ಪೂಜಾ, ಸಂಜಯ್ ಎಸ್.ದೇವ್, ಟಿ.ಎಸ್.ಪ್ರಸನ್ನಲಕ್ಷ್ಮಿ, ಟಿ.ಎಚ್.ರಾಮಕೃಷ್ಣಯ್ಯ ಅವರನ್ನು ಅಭಿನಂದಿಸಲಾಯಿತು.
ಉದಯಭಾರತಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ದೇವರ ಮನೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕ ಚೈತನ್ಯ, ನರಸಿಂಹಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. (ರವಿ) ಸ್ವಾಗತಿಸಿದರು, ಉಷಾ ಶ್ರೀನಿವಾಸ್ ನಿರೂಪಿಸಿದರು. ಡಾ.ಎ.ನಾಗರಾಜು ವಂದಿಸಿದರು.