ಯಾದವ ಸಮಾಜ ಕಡೆಗಣನೆ ಸಲ್ಲ: ತೀರ್ಥಕುಮಾರ ಯಾದವ್
ತಿಪಟೂರು: ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಕಾನೂನು ಸಚಿವರಾಗಲು ಮೂಲತಃ ಗೊಲ್ಲಜನಾಂಗವೇ ಕಾರಣವಾಗಿದ್ದು, ಕನಿಷ್ಠ 250 ಜನ ಗೊಲ್ಲ ಜನಾಂಗದವರು ವಾಸಿಸುವ 50 ಮನೆ ಇರುವ ಊರನ್ನು ಕಂದಾಯ ಗ್ರಾಮವನ್ನಾಗಿ ಮಾಡುತ್ತೇವೆ ಎಂದು ಅಧಿವೇಶನದಲ್ಲಿ ಆಶ್ವಾಸನೆ ನೀಡಿದ್ದು ಬಿಟ್ಟರೆ ಅದನ್ನು ಜಾರಿಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಯುವ ಯಾದವ ಸಂಘದ ಜಿಲ್ಲಾಧ್ಯಕ್ಷ ತೀರ್ಥಕುಮಾರ ಯಾದವ್ ಸಚಿವರ ಆಶ್ವಾಸನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವರಾದ ಎಚ್. ಆಂಜನೇಯ ಅವರು ಕಾಡುಗೊಲ್ಲ ಜನಾಂಗವನ್ನು ಎಸ್ಟಿಗೆ ಸೇರಿಸುವ ಬಗ್ಗೆ ಚಿಂತಿಸುವುದಾಗಿ ಹೇಳಿದ್ದರು.
ಆದರೆ ಇವರು ಆಶ್ವಾಸನೆ ನೀಡಿದ್ದ ಯಾವುದೇ ಯೋಜನೆಗಳನ್ನು ಈವರೆಗೂ ಜಾರಿಗೊಳಿಸಿಲ್ಲ. ಆದ್ದರಿಂದ ಈ ಸಚಿವರು ನೀಡಿರುವ ಆಶ್ವಾಸನೆಗಳು ಲೋಕಸಭೆ ಚುನಾವಣೆಗಿಂತ ಮುಂಚೆಯೇ ಜಾರಿಯಾಗಬೇಕು. ಜೊತೆಗೆ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಯಾದವ ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ಗುಡಿಸಲು ರಹಿತ ಮನೆಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಗಮನ ಹರಿಸಬೇಕೆಂದರು.
ಈ ಬಗ್ಗೆ ಸಚಿವರು ಚಿಂತನೆ ಮಾಡದಿದ್ದಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಯಾದವ ಜನಾಂಗಕ್ಕೆ ತಪ್ಪು ಮಾಹಿತಿ ರವಾನೆಯಾದಂತಾಗುತ್ತದೆ. ಯಾದವ ಸಮಾಜವನ್ನು ಕಡೆಗಣಿಸುವುದನ್ನು ಬಿಟ್ಟು ಆದಷ್ಟು ಬೇಗ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ತೀರ್ಥಕುಮಾರ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಯಾದವ ಸಂಘದ ಖಜಾಂಜಿ ಕಾಟೇಶ, ಮುಖಂಡರಾದ ಶಶಿ, ಶಶಿಧರ್, ಗಂಗಾಧರಯ್ಯ, ವಿಶ್ವನಾಥ, ಲೋಕೇಶ್ ಮತ್ತಿತರರಿದ್ದರು.