ವಿಕಲ ಚೇತನ ವಿದ್ಯಾರ್ಥಿಗಳು ಸವಲತ್ತು ಸದ್ಬಳಕೆ ಮಾಡಿಕೊಳ್ಳಲಿ: ಆಂಜನಪ್ಪ
ಕನ್ನಡಪ್ರಭ ವಾರ್ತೆ ಮಧುಗಿರಿ ಡಿ.26
ವಿಕಲ ಚೇತನ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಬೇರೆಯವರಿಗಿಂತ ನಾವು ಕಮ್ಮಿ ಇಲ್ಲ ಎಂಬ ಮನೋಭಾವ ಬೆಳಸಿ ಕೊಳ್ಳುವ ಮೂಲಕ ಸರ್ಕಾರದಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿ ಸೇರಬೇಕು ಎಂದು ಡಿಡಿಪಿಐ ಟಿ.ಎಸ್.ಆಂಜನಪ್ಪ ಕರೆ ನೀಡಿದರು.
ಜಿ.ಪಂ.ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಕಲ ಚೇತನ ವಿದ್ಯಾರ್ಥಿಗಳಿಗೆ ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಕರು ಶಾಲೆಯಲ್ಲಿ ಪಾಠ ಹೇಳುವಾಗ ವಿಕಲ ಚೇತನ ವಿದ್ಯಾರ್ಥಿಗಳನ್ನು ಮೊದಲ ಸಾಲಿನಲ್ಲಿ ಕೂರಿಸುವಂತೆ ಸಲಹೆ ನೀಡಿದ ಅವರು, ಪೋಷಕರು ತಮ್ಮ ಮಕ್ಕಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ವಿಕಲ ಚೇತನ ಮಕ್ಕಳಲ್ಲಿ ಅಗಾಧವಾದ ಪ್ರತಿಭೆಯಿದ್ದು ಇತ್ತಿಚೆಗೆ ಸರ್ಕಾರಿ ಉದ್ಯೋಗ ಪಡೆಯುತ್ತಿದ್ದಾರಲ್ಲದೆ ತಾಲೂಕು, ಜಿಲ್ಲೆ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ದೇಶಕ್ಕೆ ಒಳ್ಳೆಯ ಹೆಸರು ತಂದಿದ್ದಾರೆ ಎಂದು ಶ್ಲಾಘೀಸಿದರು.
ಜಿ.ಪಂ.ಸದಸ್ಯೆ ಮಂಜುಳಾ ವೀರೇಂದ್ರ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಎಂದರೆ ನಾವೆಲ್ಲ ಒಂದೇ ಎಂಬ ಮನೋಭಾವ ಹೊಂದಿ ಸಮಾಜದಲ್ಲಿ ಸಾಂಘಿಕ ಜೀವನ ನಡೆಸಲು ಮುಂದಾಗಬೇಕು ಎಂದರು.