ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸರ್ಕಾರಿ ನೌಕರರು ಜನಸೇವಕರೆಂಬ ಮನೋಭಾವ ಹೊಂದಿರಲಿ: ಶಾಸಕ

Rashmi Kasaragodu
Updated On : 27 Dec 2013, 1:57 am

ಕ.ಪ್ರ.ವಾರ್ತೆ   ಕುಣಿಗಲ್   ಡಿ.26
ಸರ್ಕಾರಿ ನೌಕರರು ತಾವು ಜನಸೇವಕರೆಂಬ ಮನೋಭಾವ ಹೊಂದಿ,  ಕರ್ತವ್ಯವನ್ನು ಬದ್ಧತೆ, ಪ್ರಾಮಾಣಿಕತೆಯಿಂದ ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ, ನಿಗದಿತ ಅವಧಿಯೊಳಗೆ ನಿರ್ವಹಿಸದ ಹೊರತು, ಭ್ರಷ್ಟಾಚಾರ ರಹಿತ ಆಡಳಿತವ್ಯವಸ್ಥೆ ನಿರ್ಮಾಣ ಸಾಧ್ಯವಿಲ್ಲವೆಂದು ಶಾಸಕ ಡಿ.ನಾಗರಾಜಯ್ಯ ಅಭಿಪ್ರಾಯಪಟ್ಟರು.
ಬುಧವಾರ, ನಿವೃತ್ತ ನೌಕರರ ದಿನಾಚರಣೆ ಮತ್ತು ಸರ್ವಸದಸ್ಯರ ವಾರ್ರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಬುಧವಾರ ಬೆಳಿಗ್ಗೆ ಬೆಳಗಾವಿ ಜಿಲ್ಲೆಯಲ್ಲಿ, ವಾಹನಚಾಲಕರೊಬ್ಬರಿಗೆ ಪೊಲೀಸ್ ಸಿಬ್ಬಂದಿ ಲಂಚಕ್ಕಾಗಿ ಪೀಡಿಸಿದ ಘಟನೆ ಪ್ರಸ್ತಾಪಿಸಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರಿಗೆ ಸರ್ಕಾರ ಎಲ್ಲಾ ಸವಲತ್ತು ನೀಡಿದರೂ, ಲಂಚಕ್ಕಾಗಿ ಹಪಾಹಪಿಸುವ ಪ್ರವೃತ್ತಿಯಿಂದ ಇಂದು ಹಲವರ ಪ್ರಾಣಹರಣವಾಗುತ್ತಿದೆ. ಇಂದೂ ಸಹ ಮಹಿಳೆಯೊಬ್ಬರು ಮೃತಪಟ್ಟಿದ್ದು, ತಮ್ಮದಲ್ಲದ ತಪ್ಪಿಗೆ ಅಮಾಯಕ ರೋಗಗ್ರಸ್ಥ ಮಹಿಳೆಯ ಸಾವಿಗೆ ಲಂಚಗುಳಿತನ ಕಾರಣವಾಗಿದೆ. ಇಂತಹ ಘಟನೆಗಳು ನಾಗರಿಕ ಸಮಾಜವು ತಲೆತಗ್ಗಿಸುವ ಕೃತ್ಯಗಳಾಗಿದ್ದು, ಇಂತಹ ಕೃತ್ಯಎಸಗುವ ಸರ್ಕಾರಿ ನೌಕರರಿಗೆ ತಕ್ಕಪಾಠ ಕಲಿಸುವ ವ್ಯವಸ್ಥೆಯಾಗಬೇಕಿದೆ ಎಂದರು.
ನಿವೃತ್ತ ಸರ್ಕಾರಿ ನೌಕರರೆ ತಮ್ಮ ಬೇಡಿಕೆ ಈಡೇರಿಸಲು, ಹಲವು ಹೋರಾಟ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ  ಎಂದರೆ, ಇನ್ನು ಶ್ರೀಸಾಮಾನ್ಯನ ಪಾಡೇನು ಎಂದು ಆತ್ಮಾವಲೋಕನ ಮಾಡಿಕೊಳ್ಳುವುದರ ಜೊತೆಗೆ, ಹಾಲಿ ಸರ್ಕಾರಿ ವ್ಯವಸ್ಥೆ  ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಹಲವು ವಿದ್ಯಮಾನಗಳು ಕೈಗನ್ನಡಿಯಾಗಿದೆ. ದಿನದಿಂದ ದಿನಕ್ಕೆ ಸರ್ಕಾರಿ ನೌಕರರಲ್ಲಿ ವೃತ್ತಿಬದ್ಧತೆ ಮತ್ತು ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ನಿವೃತ್ತರಾದ ಹಿರಿಯ ಸರ್ಕಾರಿ ನೌಕರರು, ಸೇವೆಯಲ್ಲಿರುವ ನೌಕರರಿಗೆ ಮಾರ್ಗದರ್ಶನ ನೀಡಬೇಕಿದೆ ಎಂದರು.
ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಆರ್. ಬೋಬಡೆ, ತಾಲೂಕು ಅಧ್ಯಕ್ಷ ಬಿ.ಟಿ. ವೆಂಕಟೇಗೌಡ, ಪದಾಧಿಕಾರಿಗಳಾದ ಮಾಲೂರಪ್ಪ, ಲಕ್ಷ್ಮೀಕಾಂತ, ಕೆ.ಎ.ಪಿ.ಗುಪ್ತ, ವೆಂಕಟಸುಬ್ಬಯ್ಯ, ಹನುಮಂತರಾಜು,  ಗಂಗಪ್ಪ, ತಾಲೂಕು ಕಸಾಪ ಅಧ್ಯಕ್ಷ ದಿನೇಶ ಕುಮಾರ ಇತರರು ಉಪಸ್ಥಿತರಿದ್ದರು. ಸಂಘದ 80ವರ್ಷ ಮೇಲ್ಪಟ್ಟ ಸದಸ್ಯರಾದ ವೆಂಕಟರಾಮಣ್ಣ, ಅಬ್ದುಲ್ ನಜೀರ್, ಸಿದ್ದಗಂಗಯ್ಯ, ವೆಂಕಟಯ್ಯ ಪಾರ್ವತಮ್ಮ, ಪುಟ್ಟರಾಮು ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement