ಕ್ಷುಲಕ ಕಾರಣಕ್ಕೆ ಹೊಡೆದಾಟ: ಠಾಣೆ ಮೆಟ್ಟಿಲೇರಿದ ಪ್ರಕರಣ
ಕುಣಿಗಲ್: ಸೈಕಲ್ ಸ್ಟ್ಯಾಂಡ್ನಲ್ಲಿ ಸೈಕಲ್ ತೆಗೆಯುವ ಕ್ಷುಲಕ ಕಾರಣಕ್ಕೆ ಪಟ್ಟಣದ ಮಹಾತ್ಮಗಾಂಧಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ಪ್ರಕರಣ ಪೊಲೀಸ್ ಠಾಣೆ ಮೆಟ್ಟಲೇರಿದೆ.
ಪಟ್ಟಣದ ಮಹಾತ್ಮಗಾಂಧಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಎರಡು ಗುಂಪು, ಗುರುವಾರ ಮಧ್ಯಾಹ್ನ, ಸೈಕಲ್ ಸ್ಟ್ಯಾಂಡ್ನಿಂದ ಸೈಕಲ್ ತೆಗೆಯುವ ವಿಷಯದಲ್ಲಿ ಕಿತ್ತಾಡಿಕೊಂಡಿದ್ದು,ಶಿಕ್ಷಕರ ಮಧ್ಯಪ್ರವೇಶದಿಂದ ತಣ್ಣಗಾಗಿತ್ತು. ಶುಕ್ರವಾರ ಮಧ್ಯಾಹ್ನವೂ ಸೈಕಲ್ ಸ್ಟ್ಯಾಂಡ್ನಲ್ಲಿ ಸೈಕಲ್ ತೆಗೆಯುವ ಕ್ಷುಲಕ ಕಾರಣಕ್ಕೆ, ಗುರುವಾರದ ಘಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಶಿಕ್ಷಕರು ತರಗತಿಯಿಂದ ಹೊರಬಂದು ನೋಡುವಷ್ಟರಲ್ಲಿ ಬೈದಾಟ ತಾರಕ್ಕೇರಿ, ಬಡಿದಾಡಿಕೊಂಡು ಶಾಲಾ ಕಾಂಪೌಂಡ್ ಹಾರಿ, ಮುಖ್ಯರಸ್ತೆಯಲ್ಲಿ ಬಡಿದಾಡಿಕೊಳ್ಳಲು ಆರಂಭಿದರು. ವಿದ್ಯಾರ್ಥಿಗಳನ್ನು ನಿಯಂತ್ರಸಲು ಪರದಾಡಿದ ಶಿಕ್ಷಕರು ವಿಧಿ ಇಲ್ಲದೆ ಪೊಲೀಸರ ಮೊರೆ ಹೋದರು.
ಪಿಎಸ್ಐ ಗುರುಪಸ್ರಸಾದ್ ಮತ್ತು ಸಿಬ್ಬಂದಿ ಶಾಲೆ ಕಡೆ ಬರುವುದನ್ನು ಕಂಡ ವಿದ್ಯಾರ್ಥಿಗಳು, ಬಡಿದಾಟ ನಿಲ್ಲಿಸಿ, ತರಗತಿಗೆ ಹಾಜರಾದರು. ನಂತರ ಬಡಿದಾಟದಲ್ಲಿ ತೊಡಗಿದ್ದ ಎರಡೂ ಕಡೆಯ ಎಂಟಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದರು.
ವಿಷಯ ತಿಳಿದ ಪೋಷಕರು ಗಾಬರಿಗೊಂಡು ಠಾಣೆಗೆ ದೌಡಾಯಿಸಿ, ತಮ್ಮ ಮಕ್ಕಳ ಬಿಡುಗಡೆಗೆ ಒತ್ತಾಯಿಸಿದರು. ಪೋಷಕರ ಮುಂದೆ ಅವರ ಮಕ್ಕಳ ಬಡಿದಾಡದ ಘಟನೆ ಬಿಡಿಸಿದ ಪೊಲೀಸರು, ವಿದ್ಯಾರ್ಥಿ ಹಾಗೂ ಪೋಷಕರಿಗೆ ಬುದ್ಧಿವಾದ ಹೇಳಿ, ಮುಂದಿನ ದಿನಗಳಲ್ಲಿ ಘಟನೆ ಮರುಕಳಿಸಿದಲ್ಲಿ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ ಕಳುಹಿಸಿದರು.
ಶಾಲೆಯಲ್ಲಿ ವಿದ್ಯಾರ್ಥಿಗಳ ಬಡಿದಾಟದ ಘಟನೆ ತಿಳಿದ ಬಿಇಒ ಸಿದ್ದಯ್ಯ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಡಿ. ಕೃಷ್ಣ , ಆರ್ಸಿ ಗುಲ್ಜಾರ್ ಅಹಮದ್, ಶಿಕ್ಷಕರಿಂದ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಸೂಚನೆ ನೀಡಿದರು. ಈ ಮಧ್ಯೆ ಕೆಲ ಪೋಷಕರು, ಪ್ರೌಢಶಾಲಾ ವಿಭಾಗದ ಶಿಕ್ಷಕರಲ್ಲಿನ ಗುಂಪುಗಾರಿಕೆಯಿಂದಾಗಿ ವಿದ್ಯಾರ್ಥಿಗಳು ಪ್ರಚೋದನೆಗೆ ಒಳಗಾಗಿ ಬಡಿದಾಟಕ್ಕೆ ಇಳಿಯುವಂತಾಗಿದ್ದು, ಶಿಕ್ಷಣ ಇಲಾಖಾಧಿಕಾರಿಗಳು ಕೂಡಲೆ ಕ್ರಮ ಕೈಗೊಂಡು ಶಿಕ್ಷಕರ ಗುಂಪುಗಾರಿಕೆ ಪ್ರವೃತ್ತಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.