ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರೇಲ್ವೆ ಭೂ ಸ್ವಾಧೀನ ಅವೈಜ್ಞಾನಿಕ, ರೈತರ ಆಕ್ರೋಶ

Mainashree
Updated On : 27 Dec 2013, 9:54 am

ಕ.ಪ್ರ. ವಾರ್ತೆ  ತುಮಕೂರು  ಡಿ. 27
ಸರ್ವಾಧಿಕಾರಿ ಧೋರಣೆಗೆ ಜಿಲ್ಲೆಯಲ್ಲಿ ನಡೆದಿರುವ ರೇಲ್ವೆ ಭೂ ಸ್ವಾಧೀನ ಅತ್ಯುತ್ತಮ ಉದಾಹರಣೆಯಾಗಿದೆ. ಈ  ಭೂ ಸ್ವಾಧೀನ ಅವೈಜ್ಞಾನಿಕವಾಗಿದ್ದು, ರೈತರ ಬದುಕನ್ನು ಇಲ್ಲವಾಗಿಸುತ್ತಿದೆ ಎಂದು ರೇಲ್ವೆ ಯೋಜನೆ ಭೂ ಸ್ವಾಧೀನ ರೈತರ ಹೋರಾಟ ಸಮಿತಿ ಆಕ್ರೋಶವ್ಯಕ್ತಪಡಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು, ತುಮಕೂರು - ರಾಯದುರ್ಗ, ದಾವಣಗೆರೆ ರೇಲ್ವೆ ಯೋಜನೆ ಭೂ ಸ್ವಾಧೀನ ರೈತರ ಮೇಲೆ ಚಪ್ಪಡಿ ಎಳೆಯುವಂತಿದೆ. ಸುಪ್ರೀಂಕೋರ್ಟ್ ಸಹ ಭೂ ಸ್ವಾಧೀನಕ್ಕೆ ಒಳಪಟ್ಟ ರೈತರಿಗೆ ಅನ್ಯಾಯವಾಗದಂತೆ ಪರಿಹಾರ ನೀಡಬೇಕೆಂದು ಸಲಹೆ ನೀಡಿದೆ.  ಆದರೆ ನ್ಯಾಯಾಲಯ ಸಲಹೆಯನ್ನು ರಾಜ್ಯ ಸರ್ಕಾರ ಕೇರ್ ಮಾಡುತ್ತಿಲ್ಲ. ಇದೇನು ಪ್ರಜಾಪ್ರಭುತ್ವವೋ, ಸರ್ವಾಧಿಕಾರತ್ವವೋ ಎಂದು ಪ್ರಶ್ನಿಸಿದೆ.
ಇತ್ತೀಚೆಗೆ ಲ್ಯಾಂಡ್ ಅಕ್ವಿಜೇಷನ್ ಅಂಡ್ ರೀ ಸೆಟಲ್‌ಮೆಂಟ್ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರಗೊಂಡು 2014 ರಿಂದ ಜಾರಿಗೊಳ್ಳಲಿದೆ. ಜಿಲ್ಲೆಯಲ್ಲಿ ಗ್ಯಾಸ್ ಪೈಪ್ ಲೈನ್ ಯೋಜನೆ, ಕೈಗಾರಿಕಾ ವಲಯದ ಭೂ ಸ್ವಾಧೀನ, 2011 ನೇ ಸಾಲಿನಲ್ಲಿ ಬೆಂಗಳೂರು ನಗರ ಕೆಂಪೇಗೌಡ ಬಡಾವಣೆಗೆ ಸಂಬಂಧಿಸಿದಂತೆ  2009-11 ರ ರಾಜ್ಯಪತ್ರದ ಆಧಾರದಲ್ಲಿ 4043 ಎಕರೆ 27 ಗುಂಟೆ ಜಮೀನಿಗೆ ಒಪ್ಪಿಗೆ ಐ ತೀರ್ಪು ಪ್ರಕಾರ, ಒಟ್ಟು 3242. 61 ಕೋಟಿ ರು. ಮೊತ್ತದ ಭೂ ಪರಿಹಾರ ನೀಡಿದ ಉದಾಹರಣೆಗಳು ಸಾಕಷ್ಟಿವೆ. ತುಮಕೂರು ಜಿಲ್ಲೆ ರೈಲ್ವೆ ಯೋಜನೆ ಭೂ ಸ್ವಾಧೀನದ ಪರಿಹಾರಕ್ಕೆ ಹಲವಾರು ಸಭೆಗಳು ನಡೆಯುತ್ತಲೇ ಇವೆ, ಆದರೆ ರೈತ ಪರ ಪ್ರಗತಿ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ತುಮಕೂರು ನಗರ, ಕಸಬಾ ಹೋಬಳಿ ಗ್ರಾಮಗಳು ಸೇರಿದಂತೆ ಜಿಲ್ಲೆಯ ಜಮೀನು ಕೋಟ್ಯಂತರ ರು. ಬೆಲೆ ಬಾಳುವ ಭೂಮಿಯಾಗಿದೆ ಎಂದು ತಿಳಿಸಿದೆ.
ಚಿನ್ನದ ಬೆಲೆ: ಜಿಲ್ಲಾಡಳಿತ ರೈತರ ಹಿತವನ್ನು ಮರೆತು ಕೆಲವೇ ಲಕ್ಷ ರು. ಗಳ ಜನರಲ್ ಅವಾರ್ಡ್‌ನ ಪರಿಹಾರ ನೀಡಲು ಏಕಪಕ್ಷೀಯವಾಗಿ ಮುಂದಾಗಿದೆ. ಇಂತಹ ರೈತ ವಿರೋಧಿ ನೀತಿಯನ್ನು ರೈತರು ಹಾಗೂ ರೈತ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿವೆ. ಚಿನ್ನದ ಬೆಲೆ ಬಾಳುವ ಜಮೀನನ್ನು ತುಕ್ಕು ಹಿಡಿದ ಕಬ್ಬಿಣದ ರೇಟಿಗೆ ನಿಗದಿಪಡಿಸಲಾಗಿದೆ. ಇದೊಂದೇ ಸಾಕು ರಾಜ್ಯ ಕಾಂಗ್ರೆಸ್ ಸರ್ಕಾರದ ರೈತರ ಮೇಲಿನ ಪ್ರೇಮಕ್ಕೆ ಸಾಕ್ಷಿ ಎಂದು ಮಾರ್ಮಿಕವಾಗಿ ತಿಳಿಸಿದೆ.
ಕಾನೂನು ಸಚಿವರ ತಾರತಮ್ಯ: ಅಧಿಕಾರಕ್ಕೆ ಬರುವ ಮುನ್ನ ಎಲ್ಲದಕ್ಕೂ ಚಳವಳಿ ನಡೆಸುತ್ತಿದ್ದ ಕಾನೂನು, ಸಂಸದೀಯ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಯಚಂದ್ರ, ಈಗ ರಾಗ ಬದಲಿಸಿದ್ದಾರೆ. ಐ ತೀರ್ಪಿನ ಕಾನೂನು ರೂಪಿಸಲು ಮೀನಾ ಮೇಷಾ ಎಣಿಸುತ್ತಿರುವುದು ಗಮನಾರ್ಹ ಸಂಗತಿ. ಷರತ್ತುಗಳ ವಿದೇಶಿ ಬಂಡವಾಳದ ಮಂತ್ರ ಜಪಿಸುವವರಿಗೆ ಅಪೇಕ್ಷಿತ ಸ್ವ ಇಚ್ಛೆ ರೈತರ ಭೂಮಿ ಸಹ ಬಂಡವಾಳದ ಭಾಗ ಎಂದು ಏಕೆ ತಿಳಿಯುತ್ತಿಲ್ಲ ಎಂದು ರೇಲ್ವೆ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಮಾರ್ಮಿಕವಾಗಿ ಪ್ರಶ್ನಿಸಿದೆ.
ರೈತರಿಗೆ ಲಾಭವಿಲ್ಲ: ಕಾರ್ಪೋರೇಟ್ ಕಂಪನಿಗಳ ಲಾಭ ಬೆಳೆಯುತ್ತಿದೆ. ಎಂಪಿ. ಎಂಎಲ್‌ಎಗಳ ಗೌರವಧನ ಹೆಚ್ಚುತ್ತಿದೆ. ಅಧಿಕಾರಿಗಳ ವೇತನ ಏರುತ್ತಿದೆ. ಕಾಂಟ್ರಾಕ್ಟ್‌ಗಳ ದರಪಟ್ಟಿ ದುಪ್ಪಟ್ಟಾಗುತ್ತಿದೆ. ಆದರೆ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಕೃಷಿಗೆ ಮೂಲ ಸೌಕರ್ಯಗಳು ದೊರೆಯದೆ ವಿನಾಶದ ಅಂಚಿಗೆ ತಲುಪಿದೆ. ರೈತರು ಕಷ್ಟಪಟ್ಟು ಬೆಳೆದ ಕೃಷಿ ವಸ್ತುಗಳಿಗೆ ವೈಜ್ಞಾನಿಕ ಬೆಲೆ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಅಸಂಘಟಿತ ವಲಯದ ಕೃಷಿ ಕೂಲಿ ಕಾರ್ಮಿಕರಿಗೆ ಭದ್ರತೆ ಸಿಗುತ್ತಿಲ್ಲ. ರೈತ ದೇಶದ ಬೆನ್ನೆಲುಬು, ಅನ್ನದಾತ ಎಂಬುದು ಹೊಗಳಿಕೆಗಷ್ಟೇ ಸೀಮಿತವಾಗಿದೆ. ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದರೆ ಸರ್ಕಾರಗಳು ಆರಂಭದಲ್ಲೇ ಸಮಸ್ಯೆಗಳ ಪರಿಹಾರಕ್ಕೆ ಇಚ್ಛಾಶಕ್ತಿ ತೋರದೆ, ಲಾಟಿ ಚಾರ್ಜ್, ಗೋಲಿಬಾರ್ ಮೂಲಕ ಚಳವಳಿ ಹತ್ತಿಕ್ಕಲು ಮುಂದಾಗುತ್ತಿವೆ. ವಿಕೋಪಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಾಗ ಮಾತ್ರ ಪರಿಹಾರ ಘೋಷಿಸಿ ಕೈ ತೊಳೆದುಕೊಳ್ಳುತ್ತಿವೆ. ಇಂತಹ ನೀತಿ ಬದಲಾಗಿ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳು ಸಿಗಲೇಬೇಕು. ಈ ಹಿನ್ನೆಲೆಯಲ್ಲಿ ಡಿ.30 ರಂದು ತುಮಕೂರು ಕಸಬಾದ ರಾಜಾ ಬ್ರಿಕ್ ಅಂಡ್ ಟೈಲ್ಸ್ ಕಾರ್ಖಾನೆ ಬಳಿ ರೇಲ್ವೆ ಯೋಜನೆ ಭೂ ಸ್ವಾಧೀನ ರೈತರ ಜಿಲ್ಲಾ ಮಟ್ಟದ ಬೃಹತ್ ಸಮಾವೇಶವನ್ನು ಡಿ.30 ರಂದು ಬೆಳಗ್ಗೆ 11 ಗಂಟೆಗೆ  ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾ ಮುಖ್ಯಸ್ಥ ಬಿ. ಉಮೇಶ್, ಹೋರಾಟ ಸಮಿತಿಯ ಚಿಕ್ಕರೇವಯ್ಯ, ಉಮಾ ಮಹೇಶ್, ಸೀಬಯ್ಯ, ವಿಜಯಕುಮಾರ್, ಮಂಜುನಾಥ್, ರಾಮಣ್ಣ, ತಿರುಮಲಯ್ಯ, ಕೇಶವಮೂರ್ತಿ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement