ಸೋಲಿನಿಂದ ಎಂದೂ ಮರೆಯದ ಪಾಠ
ಚನ್ನಪಟ್ಟಣ: ಗೆಲವು ಕೇವಲ ಪದಕವನ್ನು ಮಾತ್ರ ತಂದು ಕೊಡುತ್ತದೆ. ಆದರೆ ಸೋಲು ಜೀವನದಲ್ಲಿ ಎಂದೂ ಮರೆಯಲಾಗದ ಪಾಠವನ್ನು ಕಲಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ತಿಳಿಸಿದರು.
ಇಲ್ಲಿನ ಪೊಲೀಸ್ ಪರೆಡ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಕ್ರೀಡೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕ್ರೀಡಾಪಟು ಗೆಲವಿನ ಬೆನ್ನೇರಿ ಹೋಗುವುದು ಸಹಜವಾದರೂ ಗೆಲವಿಗೆ ತಲೆ ಕೆಡಿಸಿಕೊಳ್ಳಬಾರದು. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂದರು.
ಪೊಲೀಸ್ ಸಿಬ್ಬಂದಿಗಳು ಇತರ ನೌಕರರಿಗಿಂತ ಹೆಚ್ಚಿನ ಸಮಯ ಕೆಲಸ ಮಾಡುವುದರಿಂದ ಸಹಜವಾಗೇ ಮಾನಸಿಕ ಮತ್ತು ದೈಹಿಕ ಒತ್ತಡಗಳಿಗೆ ಸಿಲುಕುತ್ತಾರೆ. ಆದರೆ ಪೊಲೀಸರಿಗೆ ಸಾಕಷ್ಟು ಸಾಮಾಜಿಕ ಜವಾಬ್ದಾರಿ ಇರುವುದರಿಂದ ಈ ಒತ್ತಡಗಳ ನಡುವೆಯೂ ಕೆಲಸ ನಿರ್ವಹಿಸಲೇ ಬೇಕಾದ ಅನಿವಾರ್ಯತೆ ಇದ್ದು ಇದಕ್ಕಾಗಿ ಇಂತಹ ಕ್ರೀಡಾಕೂಟ ಅನುಕೂಲಕಾರಿಯಾಗಿವೆ ಎಂದರು. ಕ್ರೀಡಾಕೂಟ ಪರಸ್ಪರ ಸೌಜನ್ಯ, ಸಹಬಾಳ್ವೆಯನ್ನು ಬೆಸೆಯುತ್ತವೆ ಇದಕ್ಕಾಗಿಯೇ ನಮ್ಮ ಪುರಾತನ ಮಂದಿ ಕ್ರೀಡಾಕೂಟಗಳನ್ನು ಆಯೋಜಿಸುತ್ತಾ ಬಂದಿದ್ದು ಪೊಲೀಸರು ಕ್ರೀಡಾಕೂಟದಲ್ಲಿ ಹುಮ್ಮಸ್ಸಿನಿಂದ ಪಾಲ್ಗೊಂಡು ಯಶಸ್ವಿಗೊಳಿಸಬೇಕಿದೆ ಎಂದು ತಿಳಿಸಿದ ಅವರು ಕ್ರೀಡಾಪಟುಗಳಿಗೆ ಶುಭ ಕೋರಿದರು.
ತಮ್ಮ ಕರ್ತವ್ಯದ ಜತೆಗೆ ಪೊಲೀಸರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದ್ದು, ನಿಯಮಿತ ವ್ಯಾಯಾಮ ಮತ್ತು ಸಮತೋಲನ ಆಹಾರ ಸೇವನೆ ಬಹುಮುಖ್ಯವಾಗಿದ್ದು ಪೊಲೀಸರು ಆರೋಗ್ಯವಾಗಿದ್ದಲ್ಲಿ ಮಾತ್ರ ಸಮಾಜದ ಆರೋಗ್ಯ ಕಾಪಾಡಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಪ್ರಮುಖರು ಉಪಸ್ಥಿತರಿದ್ದರು.