ಶಿಕ್ಷಕರು ಅಧ್ಯಯನಶೀಲರಾಗಲಿ
ಕ.ಪ್ರ.ವಾರ್ತ್ಣೆತುಮಕೂರ್ಣು ಡಿ.28
ಕಳೆದ ಹತ್ತು, ಹದಿನೈದು ವರ್ಷಗಳಿಗೆ ಹೋಲಿಕೆ ಮಾಡಿದರೆ ಇಂದು ವಿದ್ಯಾರ್ಥಿಗಳ ಬುದ್ಧಿಮತ್ತೆ ಹೆಚ್ಚಾಗಿದ್ದು, ಶಿಕ್ಷಕರು ಸದಾ ಅಧ್ಯಯನಶೀಲರಾದಾಗ ಮಾತ್ರ ಮಕ್ಕಳ ಕುತೂಹಲವನ್ನು ತಣಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಗೋವಿಂದರಾಜು ತಿಳಿಸಿದ್ದಾರೆ.
ನಗರದ ಹಳೆ ಡಯಟ್ನಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಶಾಖೆ ಏರ್ಪಡಿಸಿದ್ದ ಕಾರ್ಯಾಗಾರ, ಸರ್ವಸದಸ್ಯರ ಸಭೆ, ಕ್ಯಾಲೆಂಡರ್ ಬಿಡುಗಡೆ ಹಾಗೂ ಮಹಿಳಾ ಘಟಕದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿರುವ 4 ಸಾವಿರಕ್ಕೂ ಹೆಚ್ಚು ಶಾಲೆಗಳಿಂದ 16 ಸಾವಿರದಷ್ಟು ಪ್ರಾಥಮಿಕ ಶಾಲಾ ಶಿಕ್ಷಕರಿದ್ದು, ಆಧುನಿಕ ತಂತ್ರಜ್ಞಾನಗಳ ಲಭ್ಯತೆ, ಪೋಷಕರ ನಿರಂತರ ಗಮನಿಸುವಿಕೆಯಿಂದ ವಿದ್ಯಾರ್ಥಿಗಳ ಬುದ್ಧಿಮತ್ತೆ ಹೆಚ್ಚಾಗಿದ್ದು, ಒಂದು ದಿನ ಓದಿ ಇಡೀ ವರ್ಷ ಪಾಠ ಮಾಡುತ್ತೇನೆ ಎಂಬ ಸ್ಥಿತಿಯಲ್ಲಿ ಶಿಕ್ಷಕರಿಲ್ಲ. ಪ್ರತಿದಿನ ಶಿಕ್ಷಕರಿಗೆ ಬೋಧನೆ ಎಂಬುದು ಸವಾಲಾಗಿದೆ. ಆದ್ದರಿಂದ ನಿರಂತರ ಅಧ್ಯಯನ ಅಗತ್ಯ ಎಂದರು.
ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರ ಮತ್ತು ಜವಾಬ್ದಾರಿಯುತ ಕೆಲಸವಾಗಿದೆ ಎಂಬುದು ವಾಸ್ತವಸತ್ಯ. ಸಮಾಜವನ್ನು ಸರಿದಾರಿಗೆ ತರಲು ಶಿಕ್ಷಕರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ತಮ್ಮ ಬೋಧನಾ ಗುಣಮಟ್ಟದವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸ್ವತಃ ಮೌಲ್ಯಮಾಪನಕ್ಕೆ ಒಳಪಡಬೇಕಾದ ಅನಿವಾರ್ಯತೆಯಿದೆ. ಸರಕಾರ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, ಮಕ್ಕಳ ಹಾಜರಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಿಸಿಯೂಟ,ಚಿಣ್ಣರ ಅಂಗಳ, ನಲಿ, ಕಲಿ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಕೋಟ್ಯಂತರ ರು. ಹಣ ಖರ್ಚು ಮಾಡುತ್ತಿದೆ. ಇವುಗಳ ಲಾಭ ಪಡೆದು ಶಿಕ್ಷಕರು ತಮ್ಮ ಬೋಧನಾ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದು ಗೋವಿಂದರಾಜು ಸಲಹೆ ನೀಡಿದರು.
ಸಹಕಾರ ನೀಡಲು ಬದ್ಧ: ಶಿಕ್ಷಕರಲ್ಲಿಯೂ ಕೆಲವರು ತಪ್ಪು ಮಾಡುವವರಿದ್ದಾರೆ. ಹಾಗೆಂದ ಮಾತ್ರ ಇಡೀ ಶಿಕ್ಷಕ ಸಮುದಾಯವನ್ನು ದೂರುವುದು ಸರಿಯಲ್ಲ. ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಹೆಚ್ಚಿನ ಶ್ರಮವಹಿಸಿ ದುಡಿಯಿರಿ. ನಿಮಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲು ನಾವು ಬದ್ಧರಿದ್ದೇವೆ ಎಂದು ಗೋವಿಂದರಾಜು ನುಡಿದರು.
ಸರಕಾರಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಜಿ.ಎಂ. ಸಣ್ಣಮುದ್ದಯ್ಯ ಮಾತನಾಡಿ, ರಾಜ್ಯದ ಸರಕಾರಿ ನೌಕರರ ಸಂಖ್ಯೆಯಲ್ಲಿ ಶೇ. 50 ರಷ್ಟಿರುವ ಶಿಕ್ಷಕರು ನೌಕರರ ಸಂಘದ ಆಧಾರಸ್ತಂಭ. ಶಿಕ್ಷಕರಿಗೆ ಗೀತೋಪದೇಶ ಮಾಡುವ ಶಕ್ತಿ ನಮಗಿಲ್ಲ. ಆದರೆ ಶಿಕ್ಷಕರು ಕಳ್ಳರು ಮತ್ತು ಪ್ರಾಮಾಣಿಕರ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕು. ವೇದಿಕೆಯ ಮೇಲೆ ಹತ್ತಿ ನಾಲ್ಕು ಶ್ಲೋಕ, ಎರಡು ವಚನ ಹೇಳಿದ ತಕ್ಷಣ ಅವರನ್ನು ಬುದ್ಧಿವಂತರು, ಪ್ರಾಮಾಣಿಕರು ಎಂಬ ತೀರ್ಮಾನಕ್ಕೆ ಬರುವುದನ್ನು ಬಿಟ್ಟು ಅವರ ಪೂರ್ವಪರಗಳ ಬಗ್ಗೆ ತಿಳಿದುಕೊಳ್ಳಿ. ಮಕ್ಕಳಿಗೆ ಒಳ್ಳೆಯ ಬೋಧನೆ ಮಾಡುವ ಮೂಲಕ ಕ್ರೌರ್ಯವನ್ನು ಕೊನೆಗಾಣಿಸಲು ಮುಂದಾಗಿ ಎಂದು ಸಲಹೆ ನೀಡಿದರು.
ಸಮನ್ವಯತೆ ಅಗತ್ಯ: ಇಂದು ಶಿಕ್ಷಕರು ಸರಕಾರಿ ಇಲಾಖೆಯ ನೌಕರರಿಂದ ಶೋಷಣೆಗೆ ಒಳಗಾಗುತ್ತಿರುವುದನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ಇಲಾಖೆಯ ನೌಕರರ ನಡುವೆ ಸಮನ್ವಯತೆಯನ್ನು ತರುವುದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಅವರು, ತಾವೆಲ್ಲಾ ನಿರೀಕ್ಷಿಸುತ್ತಿರುವ ಆರೋಗ್ಯಭಾಗ್ಯ ಯೋಜನೆ ಮುಂದಿನ 2-3 ತಿಂಗಳಲ್ಲಿ ಜಾರಿಗೆ ಬರಲಿದ್ದು, ಆರು ಪ್ರಮುಖ ಮಾರಣಾಂತಿಕ ಕಾಯಿಲೆಗಳಿಗೆ ತಕ್ಷಣ ಚಿಕಿತ್ಸೆ ದೊರೆಯಲಿದೆ ಎಂಬ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಖಜಾನಾಧಿಕಾರಿ ಶಂಕರಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಪರಮಶಿವಮೂರ್ತಿ ವಹಿಸಿದ್ದರು. ಉಪಾಧ್ಯಕ್ಷ ಷಣ್ಮುಖಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲಕೃಷ್ಣ, ಖಜಾಂಚಿ ಬಿ.ಸಿ. ಶಿವಣ್ಣ, ಸಹಕಾರ್ಯದರ್ಶಿ ಬಿ.ವಿ. ಯಶೋಧಮ್ಮ, ಸಂಘಟನಾ ಕಾರ್ಯದರ್ಶಿ ಆರ್. ಸಾವಿತ್ರಮ್ಮ, ರಾಜ್ಯ ಉಪಾಧ್ಯಕ್ಷ ಬಿ.ಆರ್. ಜಯರಾಂ, ಮಹಿಳಾ ವಿಭಾಗದ ಸಹಕಾರ್ಯದರ್ಶಿ ಜಿ.ಬಿ. ಮಂಜುಳ, ಕೆ.ಎಸ್. ಮಂಗಳಮ್ಮ, ಬಿ.ಇಓ ಕುಮದಮ್ಮ, ರಾಜ್ಯ ಉಪಾಧ್ಯಕ್ಷೆ ಶೋಭಾ, ರಾಜ್ಯಮಹಿಳಾ ಸಂಚಾಲಕಿ ಜಯಲಕ್ಷ್ಮಮ್ಮ, ಎಂ.ಡಿ. ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ಶಿವರಾಮಯ್ಯ, ಶಿವರಾಮೇಗೌಡ,ಜೂಡಾಮಣಿ ಮತ್ತಿತರರನ್ನು ಅಭಿನಂದಿಸಲಾಯಿತು.
ಕಂಪ್ಯೂಟರ್ ಟ್ಯಾಲಿ ತರಬೇತಿಗೆ ಅರ್ಜಿ
ಮಿಪ್ಸೆಡ್ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕ, ಯುವತಿಯರಿಗಾಗಿ ವಸತಿಯುತ ಉಚಿತ 30 ದಿನಗಳ ಕಂಪ್ಯೂಟರ್ ಟ್ಯಾಲಿ ತರಬೇತಿಯನ್ನು ನೀಡುವ ಸಲುವಾಗಿ ಅರ್ಹರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ತುಮಕೂರು ಜಿಲ್ಲಾ ವ್ಯಾಪ್ತಿಯ ನಿರುದ್ಯೋಗಿಗಳಿಗೆ ಕಂಪ್ಯೂಟರ್ ಟ್ಯಾಲಿ ತರಬೇತಿಗಾಗಿ ಕನ್ನಡ ಓದಲು ಮತ್ತು ಬರೆಯಲು ಬರುವ 18 ರಿಂದ 45 ವಯೋವುತಿಯೊಳಗಿನ ಅಭ್ಯರ್ಥಿಗಳು ಈಗಾಗಲೇ ಅರ್ಜಿ ಸಲ್ಲಿಸಿರುವವರು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವವರು ನೇರವಾಗಿ ಮಿಪ್ಸೆಡ್ ತರಬೇತಿ ಸಂಸ್ಥೆ, 1ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕುವೆಂಪು ವೃತ್ತ, ಕುವೆಂಪು ನಗರ, ಭುವಿ ಆಯುರ್ವೇದ್ ಆಸ್ಪತ್ರೆ ಹಿಂಭಾಗ, ತುಮಕೂರು ಇಲ್ಲಿ ಜನವರಿ 2 ರ ಬೆಳಿಗ್ಗೆ 10 ರಿಂದ 2 ಗಂಟೆಯೊಳಗಾಗಿ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಅರ್ಜಿಯಲ್ಲಿ ದೂ.ವಾ.ಸಂ. ಅಥವಾ ಮೊಬೈಲ್ ಸಂಖ್ಯೆ ನಮೂದಿಸಬೇಕು. ವಿವರಗಳಿಗೆ ಮೊ.ನಂ. 9480041026 ಸಂಪರ್ಕಿಸಿ.