ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎತ್ತಿನಹೊಳೆ ನಾಲೆ ಅಗಲೀಕರಣಕ್ಕೆ ಶೀಘ್ರ ಚಾಲನೆ

Rashmi Kasaragodu
Updated On : 30 Dec 2013, 2:37 am

ಕನ್ನಡಪ್ರಭ ವಾರ್ತೆ     ತುಮಕೂರು     ಡಿ.29
ತುಮಕೂರು ಜಿಲ್ಲೆಗೆ ಅನುಕೂಲವಾಗುವ ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಜಾರಿ ಹಾಗೂ ಹೇಮಾವತಿ ನಾಲೆ ಅಗಲೀಕರಣಕ್ಕೆ 2014 ರಲ್ಲಿ ಚಾಲನೆ ನೀಡಲಾಗುವುದು ಎಂದು ಕಾನೂನು, ಸಂಸದೀಯ, ನ್ಯಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಟಿ.ಬಿ. ಜಯಚಂದ್ರ ಭರವಸೆ ನೀಡಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹುದಿನಗಳ ಕನಸಾಗಿರುವ ಈ ಮೂರು ಯೋಜನೆಗಳಿಗೆ ಮುಂದಿನ ವರ್ಷ ಚಾಲನೆ ನೀಡುವುದು ಬಹುತೇಕ ಖಚಿತವಾಗಿದೆ. ಈ ಕುರಿತು ರಾಜ್ಯಪಾಲರ ಭಾಷಣದಲ್ಲೂ ಪ್ರಸ್ತಾಪಿಸಲಾಗಿದೆ. ಈ ಮೂರು ಯೋಜನೆಗಳನ್ನು ಜಾರಿ ಮಾಡಬೇಕೆಂಬುದು ನನ್ನ ಬಹುದಿನಗಳ ಕನಸು. ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು.     
ಒಂದು ತಿಂಗಳ ಹಿಂದೆ ಎತ್ತಿನಹೊಳೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ತುಮಕೂರು ಹಾಗೂ ಕೋಲಾರ ಜಿಲ್ಲೆ ಜನಪ್ರತಿನಿಧಿಗಳ ಸಭೆ ನಡೆದಿದೆ. ತೀರ್ಮಾನ ಕೂಡ ಆಗಿದೆ. ಬೆಳಗಾವಿ ಅಧಿವೇಶನದಲ್ಲಿ 12 ಸಾವಿರ ಕೋಟಿ ರು. ಅಂದಾಜು ವೆಚ್ಚದಲ್ಲಿ ಎತ್ತಿನ ಹೊಳೆ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ಎತ್ತಿನ ಹೊಳೆ ಯೋಜನೆಯನ್ನು ಗುರುತ್ವಾಕರ್ಷಣೆಯ ಮೂಲಕವೇ ಜಾರಿಗೊಳಿಸಲಾಗುವುದು. ಪೈಪ್ಲೈನ್ನಲ್ಲಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಯೋಜನೆ ಮೂಲಕ ಕಡಿಮೆ ಎಂದರೂ 24 ರಿಂದ 34 ಟಿಎಂಸಿ ನೀರು ತರಲು ಸಾಧ್ಯವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇನ್ನು ಭದ್ರಾ ಮೇಲ್ಗಂಡೆ ಯೋಜನೆ ತುಮಕೂರು ಕಾಲುವೆ ಮಾಡುವ  ನಿರಂತರ ಪ್ರಯತ್ನ ನನ್ನದು. ಈ ಯೋಜನೆಗೆ ತಾಂತ್ರಿಕ ಒಪ್ಪಿಗೆ ಸಿಕ್ಕಿದೆ. ಈ ಭದ್ರಾ ಮೇಲ್ದಂಡೆ ಯೋಜನೆ ನೀರು ಗುರುತ್ವಾಕರ್ಷಣೆಯ ಮೂಲಕವೇ ಹರಿಯಲಿದೆ ಎಂದು ತಿಳಿಸಿದರು.
ಹೇಮಾವತಿ ನಾಲೆ ಅಗಲೀಕರಣ: ಸದ್ಯ ತುಮಕೂರು ಜಿಲ್ಲೆಯ ಕುಡಿಯುವ ನೀರಿನ ಏಕೈಕ ಆಶಾಕಿರಣವಾಗಿರುವ ಹೇಮಾವತಿ ನಾಲೆ ಅಗಲೀಕರಣಕ್ಕೆ ಮುಂದಿನ ವರ್ಷ ಚಾಲನೆ ನೀಡಲಾಗುವುದು. ಇದೊಂದು ದುಸ್ಸಾಹಸದ ಕೆಲಸ ಎಂಬುದು ತಮಗೆ ಚೆನ್ನಾಗಿ  ಗೊತ್ತು. ಕಳೆದ ಬಜೆಟ್ನಲ್ಲಿ  ಈ ಯೋಜನೆ ಪ್ರಸ್ತಾಪಿಸಲ್ಪಟ್ಟಿದೆ. ರಾಜ್ಯಪಾಲರ ಭಾಷಣದಲ್ಲೂ ಉಲ್ಲೇಖಿಸಲ್ಪಟ್ಟಿದೆ. ಒಟ್ಟು 918 ಕೋಟಿ ರು. ಯೋಜನೆ ಇದಾಗಿದೆ. 2014 ರ ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ನಾಲೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡುವುದು ಖಚಿತ. ಮೂಲ ಸಮಸ್ಯೆ ಬಗೆಹರಿಯದೆ ತುಮಕೂರು ಜಿಲ್ಲೆಗೆ ಸಂಪೂರ್ಣ ನೀರೊದಗಿಸಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು. ತುಮಕೂರು ಜಿಲ್ಲೆಗೆ ನಿಗದಿಯಾಗಿರುವ ಹೇಮಾವತಿ ನೀರು ಸದ್ಬಳಕೆ ಮಾಡಿಕೊಳ್ಳಲು ನಾಲೆ ಅಗಲೀಕರಣ ಅನಿವಾರ್ಯ ಅತ್ಯಗತ್ಯ ಎಂದು ಜಯಚಂದ್ರ ಪ್ರತಿಪಾದಿಸಿದರು.
2013 ಕಹಿ ಅನುಭವ: 2013 ರಾಜ್ಯಕ್ಕೆ ಕಹಿ ಅನುಭವದ ವರ್ಷ. ಅತಿವೃಷ್ಟೃ - ಅನಾವೃಷ್ಟಿಗಳ ಮಿಶ್ರಣ. ಮಳೆಯಾಯಿತು. ಇನ್ನೇನು ಸಮಸ್ಯೆ ಬಗೆಹರಿಯಿತು  ಮಳೆ-ಬೆಳೆ ಚೆನ್ನಾಗಿರುತ್ತದೆ ಎನ್ನುವಷ್ಟರಲ್ಲೇ ಅನಾವೃಷ್ಟಿಯೂ ಕಾಣಿಸಿಕೊಂಡಿತು. ನಿರಾಶೆಯಾಯಿತು ಎಂದ ಜಯಚಂದ್ರ, 7 ತಿಂಗಳ ಆಡಳಿತ ಪ್ರಾಮಾಣಿಕವಾಗಿದೆ. ಪಾರದರ್ಶಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಯಚಂದ್ರರ ಪುತ್ರ ಸಂತೋಷ್ ಜಯಚಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್, ಕಾಂಗ್ರೆಸ್ ಮುಖಂಡರಾದ ವೇಣುಗೋಪಾಲ್, ವಕ್ತಾರ ಜಕಣಾಚಾರ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement