'ಕುವೆಂಪು ವಿಶ್ವ ಮಾನವ ಧರ್ಮದ ಪ್ರಚಾರ ಅಗತ್ಯ'
ಕ,ಪ್ರ,ವಾರ್ತ್ಣೆ ತುಮಕೂರು ಡಿ. 29
ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಧರ್ಮದ ಪ್ರಚಾರ ಅಗತ್ಯವಾಗಿದೆ ಎಂದು ಆಡಿಟರ್ ಯಲಚವಾಡಿ ನಾಗರಾಜ್ ಅಭಿಪ್ರಾಯಪಟ್ಟರು.
ನಗರದ ಸದಾಶಿವನಗರದ ಟೂಡಾ ಲೇಔಟ್ನಲ್ಲಿರುವ ಒಕ್ಕಲಿಗರ ಸಂಘದ ವಿದ್ಯಾರ್ಥಿನಿ ನಿಲಯದಲ್ಲಿ ರಾಷ್ಟ್ರಕವಿ, ವಿಶ್ವಮಾನದ ಧರ್ಮ ಪ್ರತಿಪಾದಕ ಕುವೆಂಪು ಅವರ 109 ನೇ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಕುವೆಂಪು ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಭವಿಷ್ಯದ ನಾಯಕರಾಗುವ ವಿದ್ಯಾರ್ಥಿಗಳು ಜಾತ್ಯತೀತ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವಿಶ್ವಮಾನವ ಧರ್ಮವನ್ನು ಪ್ರತಿಪಾದಿಸಿ ಕುವೆಂಪು ಅವರ ತತ್ವಾದರ್ಶಗಳನ್ನು ಪ್ರಚಾರ ಮಾಡುವ ಮೂಲಕ ಅವರನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡಬೇಕೆಂದರು.
ಕುವೆಂಪು ಮಂತ್ರ ಮಾಂಗಲ್ಯದ ಮೂಲಕ ದೇಶದಲ್ಲಿ ಸಮಾನತೆಯ ಸಮಾಜವನ್ನು ನಿರ್ಮಿಸಲು ಮುಂದಾಗಿದ್ದರು. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಾಹಿತ್ಯ, ಸಂಸ್ಕೃತಿ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಂಡು ಕನ್ನಡದ ನೆಲ, ಜಲ ಭಾಷೆಯ ಉಳಿವಿಗೆ ಪ್ರಯತ್ನಿಸಬೇಕೆಂದು ನುಡಿದರು.
ಮಲೆನಾಡಿನ ಪರಿಸರದಲ್ಲಿ ಹುಟ್ಟಿ ಹಳೆ ಮೈಸೂರು ಪ್ರಾಂತ್ಯದಲ್ಲಿ ವಿದ್ಯಾಭ್ಯಾಸ ಮಾಡಿ ಇಡೀ ನಾಡಿಗೆ ಹೊಸ ಆಲೋಚನೆಗಳನ್ನು ಬಿತ್ತಿದ ಕುವೆಂಪು ತಮ್ಮ ಮಲೆಗಳಲ್ಲಿ ಮಧುಮಗಳು, ಶ್ರೀರಾಮಾಯಣದರ್ಶನಂ ಕಾದಂಬರಿಗಳ ಮೂಲಕ ಇತಿಹಾಸ ಮತ್ತು ಪೌರಾಣಿಕದಿಂದ ಮರೆಯಾಗಿದ್ದ ಅನೇಕ ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದರು. ಅವರ ಕೃತಿಗಳು ಪೌರಾಣಿಕ ಕಥಾವಸ್ತುವನ್ನೇ ಹೊಂದಿದ್ದರೂ ಇಂದಿನ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ತಂದುಕೊಂಡು ಇತಿಹಾಸ ಮತ್ತು ವಾಸ್ತವವನ್ನು ಮುಖಾಮುಖಿಯಾಗಿಸುವ ಕೆಲಸವನ್ನು ಕುವೆಂಪು ಮಾಡಿದ್ದರು ಎಂದು ನಾಗರಾಜು ತಿಳಿಸಿದರು.
ಶ್ರೀಬೈರವೇಶ್ವ ಬ್ಯಾಂಕಿನ ನಿರ್ದೇಶಕ ಲಕ್ಕೇಗೌಡ ಮಾತನಾಡಿದರು. ಒಕ್ಕಲಿಗ ಸಂಘದ ಮುಖಂಡರಾದ ಆರ್. ನಂಜಪ್ಪ, ಕೌಶಿಕ್, ರಾಜು, ದಾಕ್ಷಾಯಿಣಿ, ಇನ್ನಿತರರು ಉಪಸ್ಥಿರಿದ್ದರು. ಮಕ್ಕಳಿಂದ ನಾಡಗೀತೆ, ಕುವೆಂಪು ಗೀತೆಗಳ ಗಾಯನ ನಡೆಯಿತು.