ಕೈಪಿಡಿಗಳು ವಿದ್ಯಾರ್ಥಿಗಳಿಗೆ ದಾರಿದೀಪ
ಕನ್ನಡಪ್ರಭ ವಾರ್ತೆ, ತುಮಕೂರು, ಡಿ.29
ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಕೈಪಿಡಿಗಳು ದಾರಿದೀಪ. ಅದರಲ್ಲೂ ಅಧ್ಯಾಪಕರ ಅನುಭವಗಳಿಂದ ಮಾಡಿದ ಕೈಪಿಡಿಗಳು ಮಾರ್ಗದರ್ಶಿಗಳಾಗಿವೆ. ಪರೀಕ್ಷೆ ಎದುರಿಸಲು ಆತ್ಮಸ್ಥೈರ್ಯ ತುಂಬಿ ಜ್ಞಾನಾರ್ಜನೆಗೊಳಿಸಲು ಇವುಗಳು ಸಹಕಾರಿ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜು ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘದ ವತಿಯಿಂದ ಹೊರತಂದಿರುವ ಪ್ರಥಮ ಪಿಯುಸಿ ಇಂಗ್ಲಿಷ್ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು. ಈಗಾಗಲೇ ಒಂದು ಲಕ್ಷ ಅನುದಾನ ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನು ಒಂದು ಲಕ್ಷ ಅನುದಾನ ನೀಡಲಾಗುವುದು. ಇದರ ಸದುಪಯೋಗವನ್ನು ಅರ್ಹ ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಬಿ. ಸಿದ್ದಯ್ಯನವರನ್ನು ಸನ್ಮಾನಿಸಿ ಮಾತನಾಡಿದ ಜಿ.ಎಸ್. ಬಸವರಾಜು ಅವರು ಕೆ. ಬಿ. ಸಿದ್ದಯ್ಯನವರು ಈ ಪ್ರಶಸ್ತಿಗೆ ಅರ್ಹರು. ಸಿದ್ದಯ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಜಿಲ್ಲೆಗೆ ಗೌರವ ಬಂದಂತಾಗಿದೆ ಎಂದರು.
ಸನ್ಮಾನ: ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಎಸ್. ಕುಮಾರಸ್ವಾಮಿ, ಟಿ.ಎನ್. ಗೋವಿಂದರಾಜು, ಎಚ್.ಎಲ್. ಜಯದೇವಪ್ಪ ಅವರನ್ನು ಸಹ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಬಿ. ಸಿದ್ದಯ್ಯ ನನ್ನನ್ನು ಸನ್ಮಾನಿಸಿದ ಪ್ರಾಚಾರ್ಯರ ಸಂಘಕ್ಕೆ ಚಿರಋಣಿಯಾಗಿರುವುದಾಗಿ ತಿಳಿಸಿದರು.
ಮನುಷ್ಯನ ಪ್ರಜ್ಞೆ ಸದಾ ಜಾಗೃತವಾಗಿದ್ದು ಚಲನಶೀಲವಾಗಿರುತ್ತದೆ. ಅಂತಹ ಅನುಭವ ಪ್ರಜ್ಞೆಯನ್ನು ಹದಗೊಳಿಸುವ ಕೆಲಸವಾಗಬೇಕು. ಮನುಷ್ಯ ಕೋಪ ತಾಪಕ್ಕೆ ತಕ್ಕಂತೆ ವರ್ತಿಸುತ್ತಾನೆ. ಆತನ ವರ್ತನೆಗಳು ಆತನ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದರು.
ದೊಡ್ಡ ಕೊಡುಗೆ: ಮಾನಸಿಕ ಪ್ರಜ್ಞೆ ಪಕ್ವವಾಗಿ ಹದವಾದಾಗ ವಿಶ್ವಮಾನವನಾಗುತ್ತಾನೆ. ಆತನ ಮಿತಿಗಳನ್ನು ಅರಿತು ಅನುಭವಶಾಲಿಗಳಾಗುವುದೇ ಇಂದು ನಾವು ಸಮಾಜಕ್ಕೆ ಕೊಡುವ ದೊಡ್ಡ ಕೊಡುಗೆ. ಅಧ್ಯಾಪಕರು, ರಾಜಕಾರಣಿಗಳು, ವಿಜ್ಞಾನಿಗಳು ಹೀಗೆ ಎಲ್ಲರಿಗೂ ಇರುವ ಜಾಗೃತ ಪ್ರಜ್ಞೆ ಪಕ್ವವಾದಾಗ ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ ಎಂದರು. ನಿವೃತ್ತ ಪ್ರಾಚಾರ್ಯರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇಂಗ್ಲಿಷ್ ಕೈಪಿಡಿ ತಯಾರಕ ಉಪನ್ಯಾಸಕರನ್ನು ಅಭಿನಂದಿಸಲಾಯಿತು. ಎನ್.ಪಿ. ನಾಗರಾಜ್ ಮಾತನಾಡಿ ತುಮಕೂರು ಜಿಲ್ಲೆ ಶೈಕ್ಷಣಿಕವಾಗಿ ಬೇರೆ ಜಿಲ್ಲೆಗಿಂತ ಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಜಿಲ್ಲಾ ಪ್ರಾಚಾರ್ಯ ಸಂಘದ ಕೆಲಸಗಳು ಇತರೆ ಜಿಲ್ಲೆಗೆ ಮಾದರಿಯಾಗಿವೆ ಎಂದು ತಿಳಿಸಿದರು.
ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ನಾಗಭೂಷಣ್ ಮಾತನಾಡಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಅನುಭವಗಳು, ನಾಯಕತ್ವದ ಗುಣಗಳು ಪ್ರಾಚಾರ್ಯರಿಗೆ ಅಗತ್ಯವಾಗಿ ಬೇಕು. ಮುಂದಿನ ದಿನಗಳಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆ ನೀಡದೆ ಯಾವುದೇ ಶಿಕ್ಷಣ ಸಂಘಟನೆಗಳು ಬೆಳೆಯುವುದಿಲ್ಲ. ಈ ನಿಟ್ಟಿನಲ್ಲಿ ಆಲೋಚಿಸಬೇಕಾದ ಅನಿವಾರ್ಯತೆ ಮುಂದಿದೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ. ಶಿವರುದ್ರಯ್ಯ ವಹಿಸಿದ್ದರು. ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ ಶೈಕ್ಷಣಿಕ ಪ್ರಗತಿಗೆ ಮತ್ತಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಸಂಘದ ಖಜಾಂಚಿ ಎಂ.ಎಸ್. ಚಿದಾನಂದ್ ವಂದಿಸಿದರು. ಪ್ರಾಚಾರ್ಯ ಎಚ್.ಕೆ. ನರಸಿಂಹಮೂರ್ತ ನಿರೂಪಿಸಿದರು.