ಶ್ರೀ ರಾಘವೇಂದ್ರ ಗಾಯನ ಸಭಾ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ತುಮಕೂರು, ಡಿ.28
ಕರ್ನಾಟಕ ಶಾಸ್ತ್ರೀಯ ಸಂಗೀತ, ಪಾಮರರನ್ನು ಭಗವಂತನ ಕೃಪಾಕಟಾಕ್ಷಕ್ಕೆ ಒಳಪಡಿಸುವ ಒಂದು ವಾಹನ. ಭಗವಂತನ ಸೇವೆಯಲ್ಲಿರುವ ಎಲ್ಲ ಸಂಗೀತ ಕಲಾವಿದರೂ ಈ ವಾಹನ ಚಾಲರಿದ್ದಂತೆ ಎಂದು ಜಿ.ವಿ. ವಿದ್ಯಾಶಂಕರ್ ಅಭಿಪ್ರಾಯಪಟ್ಟರು.
ಅವರು ನಗರದ ಸೋಮೇಶ್ವರಪುರಂನ ಶ್ರೀ ವಾಸವಿ ದೇವಸ್ಥಾನದಲ್ಲಿ ನಡೆಯುತ್ತಿರುವ, ಶ್ರೀ ರಾಘವೇಂದ್ರ ಗಾಯನ ಸಭಾದ ವಾರ್ಷಿಕೋತ್ಸವ ಹಾಗೂ ಎರಡು ದಿನಗಳ ಸಂಗೀತ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನ ಸಮಾರಂಭದಲ್ಲಿ, ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ತುಮಕೂರಿನಲ್ಲಿ ಇತ್ತೀಚೆಗೆ, ಉತ್ತಮ ಸಾಂಸ್ಕೃತಿಕ ಸಮಾರಂಭಗಳು ನಡೆಯುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಮಕ್ಕಳಿಗೆ ಪುಸ್ತಕದ ಗಣಿತ ಮುಖ್ಯವಲ್ಲ, ಜೀವನದ ಗಣಿತ ಬಹಳ ಮುಖ್ಯ ಎಂದರು.
ಜೀವನದ ಗಣಿತದಲ್ಲಿ ಪಾಸಾಗಲು, ಏಕಾಗ್ರತೆ ಬಹಳ ಮುಖ್ಯ, ಅಂತ ಏಕಾಗ್ರತೆಯನ್ನು ಸಂಗೀತ ಕಲಿಕೆ ಮಕ್ಕಳಲ್ಲಿ ಬೆಳೆಸುತ್ತದೆ ಎಂದು ನುಡಿದರು. ಆದ್ದರಿಂದ ಪಾಲಕರು ವಿದ್ಯಾಭ್ಯಾಸದ ಜೊತೆ ಜೊತೆಗೆ, ಮಕ್ಕಳನ್ನು ಸಂಗೀತ ಕಲಿಕೆಗೆ ಪ್ರೋತ್ಸಾಹಿಸುವಂತೆ ಕರೆ ನೀಡಿದರು.
ಎರಡು ದಿನಗಳ ಸಮಾರಂಭದ ವಿಧ್ಯುಕ್ತ ಆರಂಭವನ್ನು, ಜ್ಯೋತಿ ಬೆಳಗುವುದರ ಮೂಲಕ, ಯುವ ಸಮ್ಮೇಳನದ ಅಧ್ಯಕ್ಷ ರಾಮಾನುಜಂ ನೆರವೇರಿಸಿದರು. ವೇದಿಕೆಯಲ್ಲಿ ರಾಘವೇಂದ್ರ ಗಾಯನ ಸಭಾದ ಅಧ್ಯಕ್ಷೆ ವತ್ಸಲ ರಂಗರಾಜನ್ ಹಾಗು ಕಾರ್ಯದರ್ಶಿ ಲಲಿತಾಚಲಂ ಹಾಜರಿದ್ದರು. ಪುಟಾಣಿ ಪ್ರತಿಭೆಗಳಾದ ದೀಪು ಹಾಗು ಮಾನ್ಯ ಪ್ರಾರ್ಥಿಸಿದರು. ಯುವ ಕಲಾವಿದೆ ರೂಪ ನಾಗೇಂದ್ರ ನಿರೂಪಿಸಿದರು.