ಹಿಂದೂ ದೇವಾಲಯಗಳ ಮೇಲೆ ಟಾರ್ಗೆಟ್
ಕನ್ನಡಪ್ರಭ ವಾರ್ತೆ, ತುಮಕೂರು, ಡಿ.29
ಹಿಂದೂ ದೇವಾಲಯಗಳ ಮೇಲೆ ಪೊಲೀಸರು ಅದರಲ್ಲೂ ಅಡಿಷನಲ್ ಎಸ್ಪಿ ಲಕ್ಷ್ಮಣ್ ಅವರು ಟಾರ್ಗೆಟ್ ಮಾಡಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹರಿಹಾಯ್ದಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುವೆಂಪು ನಗರದಲ್ಲಿರುವ ಮುಜರಾಯಿ ಇಲಾಖೆಗೆ ಸೇರಿರುವ ದೇವಸ್ಥಾನದಲ್ಲಿ ಬೆಳಗಿನ ಜಾವ ಸುಪ್ರಭಾತ ಹಾಕಿದ್ದಕ್ಕೆ ಲಕ್ಷ್ಮಣ್ ಅವರು ದೇವಸ್ಥಾನದ ವಿರುದ್ಧ ಸಿಡಿಮಿಡಿಗೊಂಡಿರುವುದಕ್ಕೆ ಸೊಗಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ದೇವಸ್ಥಾನದಿಂದ ಪ್ರತಿ ದಿನ 100 ರು. ನಂತೆ 22 ದಿನಕ್ಕೆ 2200 ರು. ಹಾಗೂ ಸುಪ್ರಭಾತ ಹಾಕಲು ಅನುಮತಿಗೆ 150 ರು.ಗಳನ್ನು ಪಡೆದಿರುವುದಕ್ಕೆ ಸೊಗಡು ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗಿದೆ. ತುಮಕೂರಿನಲ್ಲಿ ಇದಕ್ಕಾಗಿ ಎಎಸ್ಪಿ ಲಕ್ಷ್ಮಣ್ ಅವರನ್ನು ಇಡಲಾಗಿದೆ ಎಂದಿದ್ದಾರೆ. ಇನ್ನೊಂದು ವಾರದೊಳಗೆ ಈ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು. ಅಥವಾ ಗಡಿಪಾರು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪೊಲೀಸ್ ಕ್ವಾರ್ಟರ್ಸ್ನಲ್ಲಿ ಇರಲಿ: ಕುವೆಂಪು ನಗರದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಧ್ವನಿವರ್ಧಕ ಬಳಸಿದ್ದಕ್ಕೆ ಎಎಸ್ಪಿ ಲಕ್ಷ್ಮಣ್ಗೆ ತೊಂದರೆಯಾಗುವುದಾದರೆ ಪೊಲೀಸ್ ಕ್ವಾರ್ಟಸ್ನಲ್ಲೋ ಅಥವಾ ಕಾಡಿನಲ್ಲೋ ಹೋಗಿ ಇರಲಿ ಎಂದು ಕೋಪದಿಂದ ನುಡಿದರು.
ಒಂದೆಡೆ ಹಿಂದೂ ದೇವಾಲಯಗಳ ಮೇಲೆ ಪೊಲೀಸರು ವಿನಾಕಾರಣ ಸೇಡು ತೀರಿಸಿಕೊಳ್ಳುತ್ದಿದ್ದಾರೆ. ಮತ್ತೊಂದು ಕಡೆ ಶಿರಾದಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರನ್ನು ಅನಾವಶ್ಯಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ನಾವು ಇಂಡಿಯಾದಲ್ಲಿ ಇದ್ದೇವೋ ಅಥವಾ ಪಾಕಿಸ್ತಾನದಲ್ಲಿ ಇದ್ದೇವೋ ಎಂಬುದೇ ತಿಳಿಯದಂತಾಗಿದೆ ಎಂದರು.
ದೇವಸ್ಥಾನದಲ್ಲಿ ಓಂ ನಮಃ ಶಿವಾರ್ಯ ಅನ್ನೋದೇ ತಪ್ಪು ಆದಂತಿದೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಈ ಅಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಿಸಬೇಕು ಎಂದು ಆಗ್ರಹಿಸಿದರು. ತಾವು ಶಾಸಕರಾಗಿದ್ದ 20 ವರ್ಷದ ಅವಧಿಯಲ್ಲಿ ತುಮಕೂರಿನಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಬರಲಾಗಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ತನ್ನ ಚಾಳಿ ಶುರು ಮಾಡಿದೆ. ಇದೇ ರೀತಿ ಮುಂದುವರೆದರೆ ಜನರೇ ತಕ್ಕ ಶಾಸ್ತಿ ಮಾಡುತ್ತಾರೆ ಎಂದಿದ್ದಾರೆ.
ಪಕ್ಷಕ್ಕೆ ನಿಷ್ಠೆ: ನನಗೆ ಯಾವತ್ತೂ ಪಕ್ಷ ದೊಡ್ಡದು. ಎಲ್ಲರಿಗಿಂತ ಪಕ್ಷವೇ ದೊಡ್ಡದು. ಪಕ್ಷದಡಿಯಲ್ಲಿ, ಪಕ್ಷದ ಸೂಚನೆ ಮೇರೆಗೆ ಮಾತ್ರ ನಾವು ಕೆಲಸ ಮಾಡುವುದು ಎಂದು ಸೊಗಡು ತಿಳಿಸಿದರು.
ಜಿಎಸ್ಬಿ ಬಗ್ಗೆ ಮಾತನಾಡೋಲ್ಲ: ಸಂಸದ ಜಿ.ಎಸ್. ಬಸವರಾಜು ಬಗ್ಗೆ ತಾವು ಏನನ್ನೂ ಮಾತನಾಡುವುದಿಲ್ಲ. ತಾವು ಹೇಳೋದೊಂದು, ಆದರೆ ಬೇರೆಯೇ ಅರ್ಥ ಬರುತ್ತಿದೆ. ನನಗೆ ಯಾರ ಮೇಲೂ ದ್ವೇಷವಿಲ್ಲ. ಹಾಗಾಗಿ ಬಸವರಾಜು ಬಗ್ಗೆ ತಾವು ಏನನ್ನೂ ಮಾತನಾಡಲು ಹೋಗುವುದಿಲ್ಲ ಎಂದು ತಿಳಿಸಿದರು.
ಚುನಾವಣೆಗೆ ಬಿಜೆಪಿ ಸಿದ್ಧ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್ ಮಾತನಾಡಿ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧತೆ ನಡೆಸಿದೆ. ಬೆಂಗಳೂರಿನಲ್ಲಿ ಜು. 7 ರಿಂದ ಮೂರು ದಿವಸಗಳ ಕಾಲ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ತುಮಕೂರಿನಿಂದ ಲೋಕಸಭಾ ಚುನಾವಣೆಗೆ ಎರಡು ಹೆಸರನ್ನು ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ದೇಣಿಗೆ ಸಂಗ್ರಹ: ಬಿಜೆಪಿ ವತಿಯಿಂದ ಬೂತ್ ಮಟ್ಟದಲ್ಲಿ ದೇಣಿಗೆ ಸಂಗ್ರಹಿಸಲಾಗುವುದು. ಕನಿಷ್ಠ 1 ಸಾವಿರ ರು.ನಿಂದ 5 ಸಾವಿರ ರು.ವರೆಗೆ ಹಣ ಸಂಗ್ರಹಿಸಲಾಗುವುದು. ಆನ್ಲೈನ್ನಲ್ಲೂ ಕೂಡ ಹಣ ಸಂಗ್ರಹಿಸಲಾಗುವು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಕೆ.ಪಿ. ಮಹೇಶ್, ಪ್ರೇಮ ಹೆಗ್ಗಡೆ ಮುಂತಾದವರು ಇದ್ದರು.