15 ಜಿಲ್ಲೆಗಳಲ್ಲಿ ನಗರ ಸಾರಿಗೆ ವ್ಯವಸ್ಥೆ
ಕ.ಪ್ರ.ವಾರ್ತೆ ಮಧುಗಿರಿ ಡಿ.30
ಕೇಂದ್ರ ಸರ್ಕಾರದ ನರಮ್ ಯೋಜನೆಯಡಿ ರಾಜ್ಯದ 15 ಜಿಲ್ಲೆಗಳಲ್ಲಿ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದು ಫೆಬ್ರವರಿಯಲ್ಲಿ ಇನ್ನುಳಿದ 15 ಜಿಲ್ಲೆಗಳಿಗೆ ಈ ಯೋಜನೆಯಡಿ ವಿಸ್ತರಿಸಿ ಜನತೆಗೆ ಅನುಕೂಲ ಮಾಡಿ ಕೊಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸೋಮವಾರ ಮಧುಗಿರಿ ಎಪಿಎಂಸಿ ಆವರಣದಲ್ಲಿ ನೂತನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನರಮ್ ಯೋಜನೆಯಡಿ ರಾಜ್ಯಕ್ಕೆ 2 ಸಾವಿರ ಬಸ್ ನೀಡಿದ್ದು ಆಯಾ ಭಾಗದ ಜನಸಂಖ್ಯೆಗೆ ಅನುಗುಣವಾಗಿ ತಾಲೂಕು ಕೇಂದ್ರಗಳಲ್ಲಿಯೂ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಶೃಂಗೇರಿ ತಾಲೂಕಿನಲ್ಲಿ ಈ ವ್ಯವಸ್ಥೆಯಿದ್ದು ತುಮಕೂರು ನಗರಕ್ಕೆ ಈಗಿರುವ ನೂರು ಬಸ್ಗಳ ಜತೆಗೆ 40 ಹೆಚ್ಚುವರಿ ಬಸ್ ನೀಡಿ ಜನತೆಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಮಧುಗಿರಿಯಲ್ಲಿ ಎಆರ್ಟಿಒ ಕಚೇರಿ ತೆರೆಯುವುದರಿಂದ ಶಿರಾ, ಪಾವಗಡ, ಕೊರಟಗೆರೆ ಮತ್ತು ಮಧುಗಿರಿ ತಾಲೂಕಿನ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಸಾರಿಗೆ ಸಂಸ್ಥೆ ಲಾಭ-ನಷ್ಟದ ಬಗ್ಗೆ ಚಿಂತಿಸದೇ ಗ್ರಾಮೀಣ ಜನರಿಗೂ ಸಾರಿಗೆ ಸೌಕರ್ಯ ಒದಗಿಸಲು ಬದ್ಧವಾಗಿದೆ. ಈಗ 16 ವರ್ಷ ನಷ್ಟದಲ್ಲೇ ಇದ್ದ ಸಾರಿಗೆ ಸಂಸ್ಥೆ ಸದ್ಯದ ಪರಿಸ್ಥಿತಿಯಲ್ಲಿ ಲಾಭ-ನಷ್ಟವಿಲ್ಲದೆ ನಡೆಯುತ್ತಿದೆ. ರಾಜ್ಯದಲ್ಲಿ 1.20ಲಕ್ಷ ನೌಕರ ಬಳಗ ಹೊಂದಿರುವ ಸಾರಿಗೆ ಸಂಸ್ಥೆ ನಿಗದಿತ ವೇಳೆಗೆ ವೇತನ ನೀಡುತ್ತಿದ್ದು ಡೀಸಲ್ ಬೆಲೆ ಏರಿಕೆಯಿಂದ ನಷ್ಟ ಕಂಡು ಬಂದರೂ ಕೂಡ ಸರಿದೂಗಿಸಿಕೊಂಡು ಹೋಗಲಾಗುತ್ತಿದೆ ಎಂದ ಅವರು, ಮಧುಗಿರಿಯಲ್ಲಿ ಕೆಎಸ್ಆರ್ಟಿಸಿ ಡಿಪೋ ಆರಂಭಿಸಲು ಸ್ಥಳ ದೊರೆತರೆ ಖಂಡಿತ ಸಹಾಯ ಮಾಡುವುದಾಗಿ ತಿಳಿಸಿದರು.
ಬೇಡಿಕೆ ಈಡೇರಿಕೆ: ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಈ ಭಾಗದ ಜನರ ಬಹು ದಿನಗಳ ಬೇಡಿಕೆ ಈಡೇರಿದೆ. ಸಾರ್ವಜನಿಕರಿಗೆ ಸಾರಿಗೆ ಇಲಾಖೆಯಿಂದ ನಮಗೆ ಆಗುವ ಕೆಲಸಗಳನ್ನು ಸಚಿವ ರಾಮಲಿಂಗಾರೆಡ್ಡಿ ದಾರಳ ಮನಸ್ಸಿಂದ ಮಾಡಿದ್ದಾರೆ ಎಂದರು.
ಜಿ.ಪಂ.ಸದಸ್ಯ ಎಚ್.ಕೆಂಚಮಾರಯ್ಯ, ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿದರು. ತಾ.ಪಂ.ಅಧ್ಯಕ್ಷೆ ಸಿದ್ದಗಂಗಾಂಬಿಕೆ, ಪುರಸಭೆ ಉಪಾಧ್ಯಕ್ಷೆ ಜುಬೇದಬಾನು,ತಹಸೀಲ್ದಾರ್ ಕೆ. ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜ್ಗೋಪಾಲ್, ಮಲ್ಲಿಕಾರ್ಜುನಯ್ಯ, ಪುರಸಭೆ ಸದಸ್ಯರಾದ ಎಂ.ಕೆ.ನಂಜುಂಡಯ್ಯ, ಇಓ ಮಹಾಲಿಂಗಯ್ಯ, ಪಿಸಿಕೆ ರೆಡ್ಡಿ, ಎಪಿಎಂಸಿ ಅಧ್ಯಕ್ಷ ಬಿ.ವಿ. ನಾಗರಾಜು, ಎಂ.ಎಸ್.ಚಂದ್ರಶೇಖರ್, ಅಲೀಮ್, ಗೋಪಿನಾಥ್, ಅಯೂಬ್, ಮಂಜುನಾಥ್, ಮುಖಂಡ ರಾಮಣ್ಣ,ಶ್ರೀನಿವಾಸಮೂರ್ತಿ, ಮಹಾದೇವ್, ವಿಜಯ್ಕುಮಾರ್ ಜೈನ್, ಗುಟ್ಟೆ ಚಿಕ್ಕರಂಗಪ್ಪ, ಸಾರಿಗೆ ಅಧಿಕಾರಿಗಳಾದ ಕುಬೇಂದ್ರಪ್ಪ, ಸತ್ಯನಾರಾಯಣ, ಕಾಂತರಾಜು, ಮಧುಗಿರಿ ಎಆರ್ಟಿಒ ಬಾಲಕೃಷ್ಣ, ಜಂಟಿ ಆಯುಕ್ತ ಹೇಮಂತ ಖಾಸಗಿ ಬಸ್ ಮಾಲೀಕರಾದ ವಿಶ್ವಾರಾಧ್ಯ, ಎಂ.ಎಸ್.ಶಂಕರನಾರಾಯಣ ಉಪಸ್ಥಿತರಿದ್ದರು.