ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಾನುವಾರುಗಳ ಕಳವು ನಿಯಂತ್ರಿಸಲು ಕ್ರಮ ಕೈಗೊಳ್ಳಿ: ಮನವಿ

Rashmi Kasaragodu
Updated On : 31 Dec 2013, 2:03 am

ಕುಣಿಗಲ್: ತಾಲೂಕಿನ ಹುತ್ರಿದುರ್ಗ ಹೋಬಳಿಯ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರ  ಜಾನುವಾರುಗಳು ಕಳೆದೊಂದುವಾರದಿಂದ ಕಳವು ಆಗುತ್ತಿದ್ದು, ಜಾನುವಾರುಗಳ ಕಳವು ನಿಯಂತ್ರಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.  ಹುತ್ರಿದುರ್ಗ ಹೋಬಳಿಯ ದೊಡ್ಡಪಾಳ್ಯ, ಸಂತೇಪೇಟೆ, ಹಾಲುವಾಗಿಲು, ಹನುಮೇಗೌಡನದೊಡ್ಡಿ, ಸೊಂದಲಗೆರೆ, ಸೋಮೇದೇವರಪಾಳ್ಯ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಮನೆಮುಂದೆ ಕಟ್ಟಿಲಾಗಿದ್ದ ಜಾನುವಾರುಗಳ ಪೈಕಿ, ಒಂದೊಂದು ಜಾನುವಾರುಗಳನ್ನು ರಾತ್ರಿ ವೇಳೆ ಕಳವು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮೂರು ವಿವಿಧ ಘಟನೆಗೆ ಸಂಬಂಧಿಸಿದಂತೆ ಈಗಾಗಲೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೂ. ಗ್ರಾಮಗಳ ಸುತ್ತಮುತ್ತಲ ಪ್ರದೇಶದಲ್ಲಿ ಜಾನುವಾರುಗಳ ಕಳವು ಮುಂದುವರೆದಿದ್ದು, ಜಾನುವಾರಗಳ ಕಳ್ಳತನ ನಿಯಂತ್ರಣಕ್ಕೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬೆಂಕಿಗೆ ರು. 20 ಲಕ್ಷ  ಮೌಲ್ಯದ  ಮದ್ಯ ನಾಶ
ಮಧುಗಿರಿ: ಪಟ್ಟಣದ ರಾಜರಾಜೇಶ್ವರಿ ಚಿತ್ರ ಮಂದಿರದ ಮುಂಭಾಗದಲ್ಲಿರುವ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಗೆ  ಬೆಂಕಿ ಬಿದ್ದು ಸುಮಾರು 20 ಲಕ್ಷ ರು. ಮೌಲ್ಯದ  ಮದ್ಯ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಅಂಗಡಿ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಈ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಒಳಗೆ ನೋಡಿದರೆ ವಿದ್ಯುತ್ ಸಂಪರ್ಕದ ಮೈನ್ ಸ್ವಿಚ್ಚನ್ನು ಅಂಗಡಿ ಬಾಗಿಲು ಹಾಕುವ ಮುನ್ನಾ ಆಫ್ ಮಾಡಲಾಗಿತ್ತು. ಅಂದರೆ ಈ ಮದ್ಯ ಮಾರಾಟ ಮಳಿಗೆಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ. ಈ ಅಂಗಡಿ ಸಮೀಪದಲ್ಲೇ ಚಿತ್ರಮಂದಿರವಿದ್ದು, ಜನರು ಇರುವ ವೇಳೆ ಈ ಘಟನೆ ನಡೆದಿರುವುದು ಹತ್ತು ಹಲವು  ಅನುಮಾನಕ್ಕೆ ಕಾರಣವಾಗಿದೆ. ಮದ್ಯ ಸುಟ್ಟು ಭಸ್ಮವಾಗಿರುವ ಜೊತೆಗೆ ಅಂಗಡಿ ಮಳಿಗೆ ಕಟ್ಟಡಕ್ಕೂ ಹಾನಿಯಾಗಿದೆ. ವಿಷಯ ತಿಳಿದ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಪಿಎಸೈ ಅಂಬರೀಶ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಶುದ್ಧ ಮನಸ್ಸಿನಿಂದ ಪೂಜೆ ಮಾಡಿದರೆ ದೇವರೊಲಿಯುತ್ತಾನೆ
ಚೇಳೂರು: ಪವಿತ್ರವಾದ ಅಯ್ಯಪ್ಪಸ್ವಾಮಿಯ ಮಾಲೆಯನ್ನು ಗುರುಸ್ವಾಮಿಗಳಿಂದ ಹಾಕಿಕೊಂಡು ಶುದ್ಧ ಮನಸ್ಸಿನಿಂದ, ನಿಷ್ಠೆಯಿಂದ ವೃತವನ್ನು ಮಾಡಿ ಅಯ್ಯಪ್ಪನ ದರ್ಶನ ಮಾಡಿದರೆ ಆ ಕರುಣಾಮೂರ್ತಿ ಒಲಿಯುತ್ತಾನೆ ಎಂದು ತುಮಕೂರಿನ ಅಯ್ಯಪ್ಪಸ್ವಾಮಿ ಭಜನ ಮಂಡಳಿಯ ಶ್ರೀ ಆನಂದರಾಮು ಗುರುಸ್ವಾಮಿಗಳು ಹೇಳಿದರು. ಚೇಳೂರು ದೇವಾನಂದರಾವ್ ಸ್ವಾಮಿಯವರ 18 ನೇ ವರ್ಷದ ಯಾತ್ರೆ ಪ್ರಯುಕ್ತ ನಡೆಸಿದ ಭಜನಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಪ್ರತಿಯೊಬ್ಬರು ಗುರುವಿನ ಗುಲಾಮನಾಗುವ ತನಕ ಹೇಗೆ ಅವರಿಗೆ ಮುಕ್ತಿ ಸಿಗದೋ, ಅದೇ ರೀತಿ ಅಯ್ಯಪ್ಪನ ಮಾಲೆ ಹಾಕಿಕೊಂಡಾಗ ಭಕ್ತಿ ಭಾವನೆಗಳಿಂದ ವೃತಾಚರಣೆ ಮಾಡಿ ಪ್ರತಿ ದಿನ ಬೆಳಿಗ್ಗೆ ಸಂಜೆ ಶುದ್ಧವಾಗಿ ಸ್ನಾನ ಮಾಡಿಕೊಂಡು ಶುದ್ಧ ಮನಸ್ಸಿನಿಂದ ಸ್ವಾಮಿಯ ಭಜನೆ ಮಾಡದಿದ್ದರೆ ಅವರಿಗೆ ಆ ಕರುಣಾಮೂರ್ತಿ ಕರುಣೆ ಸಿಗುವುದಿಲ್ಲ ಎಂದರು. ಈ ಸ್ವಾಮಿಯು ಆಡಂಬರಕ್ಕಾಗಲಿ, ಹಣದ ವ್ಯಾಮೋಹಕ್ಕೆ ಬಲಿಯದವರಿಗಾಗಲಿ ಒಲಿಯುವನಲ್ಲ. ಭಕ್ತಿಗೆ ಒಲಿಯುವ ಮಣಿಕಂಠ ಎಂದರು. ಈ ಸ್ವಾಮಿ ದರ್ಶನ ಮಾಡಲು ಭಕ್ತಿಯ ಇರುಮುಡಿ ಕಟ್ಟಿಕೊಂಡು ಶ್ರದ್ಧಾಭಕ್ತಿಯಿಂದ ತಲೆಯ ಮೇಲೆ ಹೊತ್ತಿಕೊಂಡು ಶಬರಿ ಯಾತ್ರೆ ಹೊರಟಿ ಅಯ್ಯಪ್ಪನ ದರ್ಶನ ಮಾಡಿ, ನಂತರ ಇರುಮುಡಿಯ ಗಂಟನ್ನು ಬಿಚ್ಚಿದಾಗ  ಅವರ ಭಕ್ತಿಯ ವೃತಾಚರಣೆಯನ್ನು ಅಯ್ಯಪ್ಪ ಅಲ್ಲಿಯೇ ತೋರಿಸುತ್ತಾನೆ ಎಂದರು. ಈ ಕಾರ್ಯಕ್ರಮದಲ್ಲಿ 18 ನೇ ವರ್ಷದ ಯಾತ್ರೆಗೆ ಹೊರಟಿರುವ ದೇವಾನಂದಸ್ವಾಮಿ, ಗುರುಸ್ವಾಮಿಗಳು,  ಬಸವರಾಜುಸ್ವಾಮಿ, ಉಮೇಶ್ಸ್ವಾಮಿ, ಪಂಚಾಕ್ಷರಿಸ್ವಾಮಿ, ಹರೀಶ್, ಕಾಂತಾರಾಜ್ ರಾವ್, ಹಿತೇಶ್, ಎಂ.ಎಸ್. ಶಿವಕುಮಾರ್, ಶೇಖರ್ ಹಾಗೂ ಭಜನ ಮಂಡಲಿಯವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement