ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಿವೃತ್ತರು ಸಮಾಜ ಸೇವೆಗೆ ಮುಂದಾಗಲಿ

Rashmi Kasaragodu
Updated On : 31 Dec 2013, 2:03 am

ಕ.ಪ್ರ.ವಾರ್ತೆ    ತುಮಕೂರು    ಡಿ.30
ಸಂಸಾರ, ಸರ್ಕಾರಕ್ಕೆ ನಿರಂತರವಾಗಿ ಸೇವೆ ಸಲ್ಲಿಸುವ ನೌಕರರು ನಿವೃತ್ತಿ ನಂತರ ಸಮಾಜ ಸೇವೆಗೆ ಮುಂದಾಗುವಂತೆ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶೆ ರತ್ನಕಲಾ ಕರೆ ನೀಡಿದರು. ಅವರು ತುಮಕೂರಿನಲ್ಲಿ ಜಿಲ್ಲಾ ನಿವೃತ್ತ ನೌಕರರ ಸಂಘದ ವತಿಯಿಂದ ಏರ್ಪಾಟಾಗಿದ್ದ ನಿವೃತ್ತರ ದಿನಾಚರಣೆ, ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರು ನೌಕರಿ, ಸಂಸಾರದ ಜಂಜಡದಲ್ಲೇ ಮುಳುಗಿರುತ್ತಾರೆ. ಮನೆ, ಸರ್ಕಾರಕ್ಕೆ ನಿರಂತರವಾಗಿ ಸೇವೆ ಸಲ್ಲಿಸಿರುತ್ತಾರೆ. ಅದು ಕರ್ತವ್ಯ ಕೂಡ. ಆದರೆ ನಿಸ್ವಾರ್ಥ ಮನೋಭಾವದಿಂದ ಸೇವೆ ಮಾಡುವ ಕಾಲ ನಿವೃತ್ತಿಯ ನಂತರ ಬರುತ್ತದೆ. ನಿವೃತ್ತಿಯೆಂದರೆ ಸಮಾಜದ ಋಣ ತೀರಿಸುವ ಪ್ರಬುದ್ಧ ಕಾಲಘಟ್ಟ. ಸರ್ಕಾರಿ ಅಥವಾ ಯಾವುದೇ ಉದ್ಯೋಗಕ್ಕೆ ನಿವೃತ್ತಿಯಿರಬಹುದು. ಆದರೆ ಮನಸ್ಸಿಗಲ್ಲ. ಮನಸ್ಸಿಗೆ ನಿವೃತ್ತಿ ಘೋಷಿಸಿದಲ್ಲಿ ಅಧ್ಯಾಯ ಮುಗಿದಂತೆಯೇ. ಹೀಗಾಗಿ ಯಾವುದೇ ಕಾರಣಕ್ಕೂ ಮನಸ್ಸಿಗೆ ನಿವೃತ್ತಿ ನೀಡದಿರುವಂತೆ ರತ್ನಕಲಾ ಸಲಹೆ ನೀಡಿದರು.
ಜೀವಮಾನ ಸವೆಸಿದರು: ಬಿಳಿಗೆರೆ ಕೃಷ್ಣಶಾಸ್ತ್ರಿಗಳಂತಹವರು ಸರ್ಕಾರದ ಯಾವುದೇ ಸಹಾಯವಿಲ್ಲದೆ ಎಲ್ಲ ವರ್ಗದ ಬಡಜನತೆಯ ಮಕ್ಕಳಿಗೆ ತಮ್ಮ ಜೀವಮಾನ ಸವೆಸಿದರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಜನತೆಯ ಹೃದಯದಿಂದ ಎಂದೂ ನಿವೃತ್ತರಾಗಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಹಾಲಿ ನಿವೃತ್ತ ನೌಕರರ ಸಂಘದಲ್ಲಿ ಬಹಳಷ್ಟು ಮಂದಿ ಪ್ರವೃತ್ತರೇ ಆಗಿದ್ದೀರಿ. ಹೀಗಾಗಿ ನಿವೃತ್ತಿ ಎಂಬ ಪದದ ಬದಲಿಗೆ ಬೇರೊಂದು ಪದ ಬಳಸುವುದು ಸೂಕ್ತ. ನೀವೆಲ್ಲಾ ಹಿರಿಯರು. ನಿಮಗೆ ಏನೂ ಹೇಳುವ ಸ್ಥಿತಿಯಲ್ಲಿ ತಾವಿಲ್ಲ. ನೆನಪಿಸಬಲ್ಲೆ ಅಷ್ಟೆ. ಒಂಟಿ ನಿವೃತ್ತ ನೌಕರರನ್ನು ಗುರುತಿಸಿ, ಅವರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಂಘದಿಂದ ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಎಂದು ಸಲಹೆ ನೀಡಿದರು.
ಸಮಗ್ರ ವ್ಯಕ್ತಿತ್ವ: ಜೀವನವನ್ನು ಸೇವಾ ಮನೋಭಾವದಿಂದ ಕಳೆದಲ್ಲಿ, ಬದುಕಿಗೆ ಸಮಗ್ರ ವ್ಯಕ್ತಿತ್ವ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ ಎಂದು ಮಾರ್ಮಿಕವಾಗಿ ನುಡಿದ, ರತ್ನಕಲಾ, ನೌಕರರು ಸೇವೆಯಿಂದ ನಿವೃತ್ತರಾದ ಬಳಿಕ ನಿಸ್ವಾರ್ಥ ಮನೋಭಾವದಿಂದ ಒಂದಲ್ಲಾ ಒಂದು ರೀತಿಯ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ನಮ್ಮ ಸುತ್ತ ಮುತ್ತಲಿನ ವಾತಾವರಣ ಸುಗಮವಾಗುತ್ತದೆ. ನಿವೃತ್ತರು, ತಮ್ಮಿಂದ ಸಮಾಜಕ್ಕೆ ಯಾವ ಕೊಡುಗೆಯನ್ನೂ ನೀಡಲು ಸಾಧ್ಯವಿಲ್ಲ ಎಂಬ ಭಾವನೆಯಿಂದ ಹೊರಬಂದು, ಯುವಜನತೆಯಂತೆ ಉತ್ಸಾಹದಿಂದ ಕಾರ್ಯಪ್ರವೃತ್ತಗಾರಬೇಕಿದೆ ಎಂದರು. ನಿವೃತ್ತ ನೌಕರರಿಗೆ ಬೆಂಗಳೂರಿನಲ್ಲಿ ಸಾಕಷ್ಟು ಅವಕಾಶಗಳಿದ್ದು,ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ನಿವೃತ್ತರು ಪಿಂಚಣಿ ತಮ್ಮ ಹಕ್ಕು ಎಂದು ಹೇಗೆ ಹಣ ಪಡೆಯುತ್ತಾರೋ ಅದೇ ರೀತಿ ದೇಶಕ್ಕಾಗಿ, ಸಮಾಜಕ್ಕಾಗಿ ದುಡಿದು ದೇಶದ ಋಣ ತೀರಿಸಬೇಕಿದೆ ಎಂದರು.
ಸಂಕಲ್ಪ ಶಕ್ತಿ ದೊಡ್ಡದು: ಸೇವೆಯಲ್ಲಿ ಸಮಾಜದ ಸ್ವಾಸ್ಥ್ಯ ಅಡಗಿದೆ. ಸಮಾಜದೊಂದಿಗೆ ಬೆರೆತಲ್ಲಿ ಹಗುರಾಗಬಹುದು. ಸಂಕಲ್ಪ ಶಕ್ತಿ ದೊಡ್ಡದು. ಸಹಜ ಜೀವನಶೈಲಿ ಮಾನವನಿಗೆ ಸಹಜತೆ, ಆರೋಗ್ಯ, ಆಯುಷ್ಯವನ್ನು ನೀಡುತ್ತದೆ ಎಂಬುದನ್ನು ಮರೆಯದಿರಿ. ಇಂದು ಔಷಧೋಪಚಾರ ತೀವ್ರವಾಗಿದೆ. ಕಾರಣ ಸಹಜತೆ ಕಳೆದುಕೊಂಡು, ಅತಿಯಾಸೆಯತ್ತ, ತೋರಿಕೆಯ ಜೀವನದತ್ತ ಜಾರುತ್ತಿರುವುದು ಎಂದು ಮಾರ್ಮಿಕವಾಗಿ ನುಡಿದರು.
ಹಿರಿಯ ನಾಗರಿಕರ ಸಂರಕ್ಷಣೆ ಕಾನೂನು: 2007 ರಲ್ಲಿ ಕೇಂದ್ರ ಸರ್ಕಾರ ನಿವೃತ್ತ ನೌಕರರಿಗೆ ಸಂಬಂಧಿಸಿದಂತೆ ಕೆಲ ನಿಯಮಾವಳಿ ತಿದ್ದುಪಡಿ ಮಾಡಿದೆ. ಈ ಕಾನೂನಿನಲ್ಲಿರುವ ಹತ್ತಾರು ಅಂಶಗಳನ್ನು, ನಿವೃತ್ತರು ಸದುಪಯೋಗಪಡಿಸಿಕೊಳ್ಳುವಂತೆ ನ್ಯಾಯಾಧೀಶೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎಂ.ಆರ್. ಬೋಬಡೆ ಪ್ರಾಸ್ತಾವಿಕ ನುಡಿಗಳನ್ನಾಡಿ, ಸಂಘಟನಾ ಶಕ್ತಿಯಿಂದ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದರು. ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಣೆ, ಆಶಾಕಿರಣ ಯೋಜನೆ ಮೊದಲಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಿವೃತ್ತ ನೌಕರರಿಗೆ ವಿವಿಧ ಇಲಾಖೆಗಳಲ್ಲಿ ಸಿಗುವಂತಹ ಹಲವು ಸವಲತ್ತುಗಳನ್ನು ಕ್ರೋಢೀಕರಿಸಿ, ಆ ಬಗ್ಗೆ ಒಂದು ಕಿರು ಹೊತ್ತಿಗೆ ಹೊರತರುವಲ್ಲಿ ಜಿಲ್ಲಾಧಿಕಾರಿಗಳು ಗಮನಹರಿಸುವಂತೆ ಮನವಿ ಮಾಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಎಂ. ಸಣ್ಣಮುದ್ದಯ್ಯ, ನಿವೃತ್ತ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಹನುಮಂತಯ್ಯ, ಮೈಸೂರು ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎನ್. ಓಬಳಯ್ಯ, ಚಿತ್ರದುರ್ಗ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪರೆಡ್ಡಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಶಿವಣ್ಣ, ಉಪನ್ಯಾಸಕಿ ಡಾ.ಶಾಲಿನಿ. ನಿವೃತ್ತ ಉಪನ್ಯಾಸಕ ಹನುಮಂತಯ್ಯ ಮತ್ತಿತರರು ಉಪಸ್ಥಿತರಿದ್ದರು.
ರೂಪ ನಾಗೇಂದ್ರ ಪ್ರಾರ್ಥಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಆರ್.ರೇವಣ್ಣ ಸ್ವಾಗತಿಸಿ, ನಂದ ಶರ್ಮಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement