ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪುಶ್ಪುಲ್ ರೈಲು ತಿಪಟೂರಿಗೂ ಬರಲಿ

Rashmi Kasaragodu
Updated On : 31 Dec 2013, 2:01 am

ತುಮಕೂರು: ತುಮಕೂರು ಬೆಂಗಳೂರು ನಡುವೆ ಓಡಾಡುತ್ತಿರುವ ಪುಶ್ಪುಲ್ ರೈಲನ್ನು ತಿಪಟೂರಿಗೂ ವಿಸ್ತರಿಸುವುದು ಸೇರಿದಂತೆ ಹತ್ತು ಹಲವಾರು ಬೇಡಿಕೆಗಳನ್ನು ಪ್ರಯಾಣಿಕರು ಜನಪ್ರತಿನಿಧಿಗಳ ಮುಂದಿಟ್ಟರು.
ತುಮಕೂರು ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ತುಮಕೂರು ಜಿಲ್ಲೆಯ ರೇಲ್ವೆ ಅಭಿವೃದ್ಧಿ ಸಂವಾದ ಕಾರ್ಯಕ್ರಮದಲ್ಲಿ ನೈಋತ್ಯ ರೇಲ್ವೆ ಅಧಿಕಾರಿಗಳನ್ನು ನಾಗರಿಕರು ಪ್ರಶ್ನಿಸಿದ ಪರಿ  ಇದು.
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ತುಮಕೂರು ಅರಸೀಕೆರೆ ಲೈನ್ ಡಬ್ಲಿಂಗ್ ಕೆಲಸ ಯಾಕೆ ಆಗ್ತಿಲ್ಲ. ಅರಸೀಕೆರೆ ಬೆಂಗಳೂರು ಪ್ಯಾಸೆಂಜರ್ ಟ್ರೈನ್ ದಿನಾ ಲೇಟಾಗಿ ಬರುತ್ತಿದೆ. ಇದರಿಂದ ಕೆಲಸಕ್ಕೆ ಹೋಗೋರಿಗೆ ಸರಿಯಾದ ಟೈಮಿಗೆ ಆಫೀಸಿಗೆ ಹೋಗೋಕೆ ಆಗ್ತಿಲ್ಲ. ಯಾಕೆ ಲೇಟ್ ಆಗ್ತಿದೆ ತುಮಕೂರು ಬೆಂಗಳೂರು ಎಕ್ಸ್ಪ್ರೆಸ್ ಟ್ರೈನ್ ಬೆಂಗಳೂರು ತಲುಪೋಕೆ ಎರಡು ಗಂಟೆ ತಗೋತದೆ. ಇದರಿಂದ ಉದ್ಯೋಗಸ್ಥರ ಅನುಕೂಲಕ್ಕಾಗಿಯೇ ಶುರುಮಾಡಿದ ರೈಲಿನ ಉದ್ದೇಶವೇ ವಿಫಲವಾಗಿದೆ. ಯಾಕೆ ಇಷ್ಟೊಂದಿ ಡಿಲೇ ಆಗ್ತಿದೆ ಎಲ್ಲ ಎಕ್ಸ್ಪ್ರೆಸ್ ರೈಲುಗಳು ತಿಪಟೂರಿನಲ್ಲಿ ಸ್ಟಾಪ್ ಕೊಡ್ತಿಲ್ಲ.
ತುಂಬಾ ತೊಂದರೆ: ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಪ್ರಯಾಣಿಕರು ನೈರುತ್ಯ ರೇಲ್ವೆ ಅಧಿಕಾರಿಗಳನ್ನು ಕೇಳಿದರು. ಲಾರಿ ಮಾಲೀಕರ ಸಂಘ ಮತ್ತು ತುಮಕೂರು ಜಿಲ್ಲಾ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಪರಮಶಿವಯ್ಯ ಅವರು ಚರ್ಚೆ  ಆರಂಭಿಸಿ, ತುಮಕೂರು ರೈಲು ನಿಲ್ದಾಣದಲ್ಲಿರುವ ಯಾರ್ಡ್ನಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು ಇದನ್ನು ಸಾಧ್ಯವಾದಷ್ಟೂ ಬೇಗನೇ ಕ್ಯಾತ್ಸಂದ್ರಕ್ಕೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದರು.
ತಿಪಟೂರು ರೇಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಶಿವಪ್ಪ ಮಾತನಾಡಿ ತಿಪಟೂರಿನಲ್ಲಿ ಎಲ್ಲ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ ಕೋರಿದರು. ವಾಣಿಜ್ಯ ನಗರಿಯಾಗಿರುವ ಇಲ್ಲಿ ರೈಲು ನಿಲುಗಡೆಯಿಂದ ಅನುಕೂಲವಾಗಲಿದೆ ಎಂದರು.
ಬೆಂಗಳೂರು-ತುಮಕೂರು ನಡುವೆ ಸಂಚರಿಸುವ ಪುಶ್ಪುಲ್ ರೈಲನ್ನು ತಿಪಟೂರುವರೆಗೆ ವಿಸ್ತರಿಸಬೇಕು. ಎಲ್ಲ ಎಕ್ಸ್ಪ್ರೆಸ್ ರೈಲುಗಳು ಪ್ಲಾಟ್ಫಾರಂ ಎರಡಕ್ಕೆ ಬರುತ್ತಿವೆ. ಅವು ಒಂದನೇ ಪ್ಲಾಟ್ಫಾರಂಗೆ ಬಂದರೆ ಅನುಕೂಲ ಎಂದರು.
ಮಹಾಲಕ್ಷ್ಮೀ ರೈಲು ಮಲ್ಲಸಂದ್ರದಲ್ಲಿ ನಿಲುಗಡೆಯಾಗಬೇಕೆಂದು ಶಿಕ್ಷಕರೊಬ್ಬರು ಕೋರಿದರೆ, ಬಾಣಸಂದ್ರದಲ್ಲಿ ಎಕ್ಸ್ಪ್ರೆಸ್ ರೈಲುಗಳು ನಿಲುಗಡೆಯಾದಲ್ಲಿ ನೆರೆಯ ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕು  ಜನರಿಗೆ ಅನುಕೂಲವಾಗಲಿದೆ ಎಂಬ ಬೇಡಿಕೆ ಕೇಳಿ ಬಂತು.
ಪ್ರಯಾಣಿಕರ ದೂರು: ತುಮಕೂರು ನಿಲ್ದಾಣದಲ್ಲಿ ಸ್ವಚ್ಛತೆ ಕೊರತೆ ಇದೆ. ರೈಲುಗಳ ಸಂಚಾರದ ಮಾಹಿತಿ ಸರಿಯಾಗಿ ದೊರೆಯುತ್ತಿಲ್ಲ. ರೈಲುಗಳು ತಡವಾಗಿ ಸಂಚರಿಸುತ್ತವೆ ಎಂದು ತುಮಕೂರು ರೈಲು ಪ್ರಯಾಣಿಕರು ದೂರಿದರು. ಯಶವಂತಪುರ-ಕೊಚುವೆಲಿ ರೈಲು ತುಮಕೂರಿನಲ್ಲಿ ನಿಲ್ಲುವಂತಾಗಬೇಕೆಂದು ಕೇರಳ ಸಮಾಜಂನ ಪದಾಧಿಕಾರಿಗಳು ಆಗ್ರಹಿಸಿದರು. ತುಮಕೂರಿನಲ್ಲಿ ಇನ್ನೂ ಎರಡು ಅಂಡರ್ಪಾಸ್ಗಳು ನಿರ್ಮಾಣವಾಗಬೇಕು. ವಿಜಯನಗರ ಸಮೀಪ ಒಂದು ಸ್ಟೇಷನ್ ಕೊಡಬೇಕು ಎಂಬ ಆಗ್ರಹಪೂರ್ವಕ ಅಭಿಪ್ರಾಯಗಳೂ ವ್ಯಕ್ತವಾದವು.
ಖರ್ಗೆಗೆ ಪ್ರಶಂಸೆ: ಸಂಸದ ಜಿ.ಎಸ್. ಬಸವರಾಜು ಮಾತನಾಡಿ ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ ಆಗಿರುವ ರೇಲ್ವೆ ಯೋಜನೆಗಳ ಅಭಿವೃದ್ಧಿ ಮತ್ತು ಮಂಜೂರಾಗಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮವನ್ನು ಶ್ಲಾಘಿಸಿದರು. ಕೊರಟಗೆರೆ ಶಾಸಕ ಪಿ.ಆರ್. ಸುಧಾಕರ್ ಲಾಲ್ ಮತ್ತು ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ತುಮಕೂರು ಜಿಲ್ಲೆಗೆ ರೇಲ್ವೆ ಇಲಾಖೆಯಿಂದ ಆಗಬೇಕಾಗಿರುವ ಯೋಜನೆಗಳು ಶೀಘ್ರವಾಗಿ  ಅನುಷ್ಠಾನಗೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೂ ಮುನ್ನ ನೈಋತ್ಯ ರೇಲ್ವೆ ಬೆಂಗಳೂರು ವಿಭಾಗದ ಡೆಪ್ಯೂಟಿ ಮುಖ್ಯ ಎಂಜಿನಿಯರ್ ಆರ್.ಕೆ. ಸಿಂಗ್ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಪ್ರಾಸ್ತಾವಿಕ ನುಡಿಗಳನ್ನಾಡಿ ಜಿಲ್ಲೆಯ ರೇಲ್ವೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಆಗಬೇಕಾಗಿರುವ ಚರ್ಚಾ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತೋರಿದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಜೀವ್ ದ್ಯಾವಣ್ಣವರ್ ಮತ್ತು ರಘುನಾಥ್ ರಾವ್ ಅವರು ತುಮಕೂರಿನ ರೇಲ್ವೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸಾಕಮ್ಮ ವೇದಿಕೆಯ ಪಾಕೆಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. ರೇಲ್ವೆ ಅಧಿಕಾರಿಗಳಾದ ಆನಂದ ಭಾರತಿ, ರವಿಕಾಂತ್, ಚಂದ್ರಶೇಖರ್ ಸಂವಾದದ ಪ್ರಶ್ನೆಗಳಿಗೆ ಉತ್ತರಿಸಿದರು.
ತುಮಕೂರು ನಗರದಲ್ಲಿ ಆಗಬೇಕಾಗಿರುವ ರೇಲ್ವೆ ಕಾರ್ಯಗಳ ಬಗ್ಗೆ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. ಜಿ.ಪಂ. ಸದಸ್ಯ ಸಿ.ಆರ್. ಉಮೇಶ್, ವೇದಿಕೆ ಉಪಾಧ್ಯಕ್ಷ ಜಯಪ್ರಕಾಶ್ ಇದ್ದರು. ತುಮಕೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಸಾಗರನಹಳ್ಳಿ ಪ್ರಭು ಮತ್ತು ಪದಾಧಿಕಾರಿಗಳು, ಚಾರ್ಟೆರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಾಸುದೇವ್, ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಟಿ.ಆರ್. ಸದಾಶಿವಯ್ಯ ಸೇರಿದಂತೆ ಹಲವಾರು ಗಣ್ಯರು ಸಂವಾದದಲ್ಲಿ ಭಾಗವಹಿಸಿದ್ದರು. ವೇದಿಕೆ ಕಾರ್ಯಕಾರಿ ಮಂಡಳಿ ಸದಸ್ಯೆ ಕಲ್ಪನಾ ಸ್ವಾಗತಿಸಿದರು.  ಉಪಾಧ್ಯಕ್ಷ ಬಾಲಾಜಿ ವಂದಿಸಿದರು. ಜಂಟಿ ಕಾರ್ಯದರ್ಶಿ ಸಗರ ಚಕ್ರವರ್ತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement