ಅಕ್ಕಿ ಅಕ್ರಮ ಆರೋಪ ತನಿಖೆಗೆ 'ಹೈ' ತಡೆ
ಬೆಂಗಳೂರು: ಅನ್ನಭಾಗ್ಯ ಯೋಜನೆ ಮೂಲಕ ವಿತರಿಸಲಾದ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಸಂಗ್ರಹಿಸಿದ ಆರೋಪ ಮೇಲೆ ತುಮಕೂರಿನ ಅಕ್ಕಿ ವ್ಯಾಪಾರಿಯೊಬ್ಬನ ವಿರುದ್ಧದ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ತುಮಕೂರಿನ ವ್ಯಾಪಾರಿ ನಾಗರಾಜ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ.ವಿ. ಚಂದ್ರಶೇಖರ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖರೀದಿಸಿ ಸಂಗ್ರಹಿಸಿಟ್ಟಿರುವ ಆರೋಪದ ಮೇಲೆ ತುಮಕೂರಿನ ಆಹಾರ ನಿರೀಕ್ಷಕರು 2013ರ ಅಕ್ಟೋಬರ್ 30ರಂದು ಗೋದಾಮಿನ ಮೇಲೆ ದಾಳಿ ನಡೆಸಿದ ತಲಾ 50 ಕೆಜಿಯ 41 ಅಕ್ಕಿ ಚೀಲಗಳನ್ನು ಜಪ್ತಿ ಮಾಡಿದ್ದಾರೆ. ಇದು ಕಾನೂನುಬಾಹಿರ. ತಾವು ಸಂಗ್ರಹಿಸಿಟ್ಟ ಅಕ್ಕಿ ಅನ್ನಭಾಗ್ಯ ಯೋಜನೆಯದ್ದು ಎಂದು ಸಾಬೀತುಪಡಿಸಲು ಅಧಿಕಾರಿಗಳ ಬಳಿ ಯಾವುದೇ ಸಾಕ್ಷಿಗಳಿಲ್ಲ. ತಮ್ಮ ವ್ಯವಹಾರದಲ್ಲಿ ನಷ್ಟ ಉಂಟು ಮಾಡುವ ಸಲುವಾಗಿ ಉದ್ದೇಶಪೂರ್ವಕವಾಗಿ ಗೋದಾಮಿನ ಮೇಲೆ ದಾಳಿ ನಡೆಸಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಸಂಸದ ಜನಾರ್ದನ ಸ್ವಾಮಿ ಶುಭಾಶಯ
ಪಾವಗಡ: ನೂತನ ವರ್ಷ ಸುಖ ಶಾಂತಿ ಸಮೃದ್ಧಿಯೊಂದಿಗೆ ಹರ್ಷ ತಂದು ದೇಶದ ಸಮಸ್ತ ಜನತೆಗೆ ಒಳಿತು ಮಾಡಲಿ ಎಂದು ಚಿತ್ರದುರ್ಗ ಲೋಕಸಭಾ ಸಂಸದ ಜನಾರ್ದನ ಸ್ವಾಮಿ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಂಗಸಮುದ್ರ ಮಹಾಲಿಂಗಪ್ಪ ಕೂಡ ಶುಭ ಹಾರೈಸಿದರು.
ಹೊಸ ವರ್ಷದ ಶುಭಾಶಯ
ತಿಪಟೂರು: ಜಿಲ್ಲಾ ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಎಸ್. ರವೀಂದ್ರ ಹಾಗೂ ಸಂಘದ ಪದಾಧಿಕಾರಿಗಳು ಜಿಲ್ಲೆಯ ಸಮಸ್ತ ಔಷಧ ವ್ಯಾಪಾರಿಗಳಿಗೆ ಹಾಗೂ ಕಲ್ಪತರು ನಾಡಿನ ಸಮಸ್ತ ಜನತೆಗೆ ಹೊಸ ವರ್ಷವು ಆರೋಗ್ಯ, ಸುಖ, ಶಾಂತಿ ನೆಮ್ಮದಿಯನ್ನು ನೀಡಲೇಂದು ಶುಭ ಹಾರೈಸಿದ್ದಾರೆ.