ಕುವೆಂಪು ಆದರ್ಶ ಯುವ ಕವಿಗಳಿಗೆ ಅಗತ್ಯ: ಡಾ.ಜಿ.ಎಸ್. ರಮೇಶ್
ತಿಪಟೂರು: ಕುವೆಂಪು ರಚಿಸಿರುವ ಯಾವುದೇ ಕೃತಿ, ಕವನಗಳಲ್ಲಾಗಲಿ ಪ್ರಕೃತಿ ಪ್ರೇಮ, ಪರಿಸರ ಸೌಂದರ್ಯಗಳ ಬಗ್ಗೆ ಹೆಚ್ಚಾಗಿ ಅಡಗಿರುತ್ತಿದ್ದವು. ಆದ್ದರಿಂದಲೇ ಅವರನ್ನು ಪ್ರಕೃತಿ ಕವಿ ಎಂದೇ ಕರೆದರು. ಸಾಮಾಜಿಕ ಸಂದರ್ಭ, ಸನ್ನಿವೇಶಗಳನ್ನು ಸೃಜನಾತ್ಮಕವಾಗಿ ವಿಶ್ಲೇಷಿಸಿ ವೈಚಾರಿಕತೆ ಬೆಳೆಸುವ ನಿಟ್ಟಿನಲ್ಲಿ ಕುವೆಂಪು ಸಾಹಿತ್ಯ ಪ್ರೇರಣೆ ನೀಡಿದೆ ಎಂದು ಕಲ್ಪತರು ವಿದ್ಯಾ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಎಸ್.ರಮೇಶ್ ತಿಳಿಸಿದರು.
ನಗರದ ಶ್ರೀ ರಾಮಮಂದಿರಲ್ಲಿ ತಾಲೂಕು ಸಿರಿಗನ್ನಡ ವೇದಿಕೆ ಹಾಗೂ ಕಾನೂನು ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಸ್ಮರಣೆ ಪ್ರಯುಕ್ತ ಸ್ವರಚಿತ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುವೆಂಪು ಅವರ ತತ್ವಾದರ್ಶಗಳನ್ನು ಯುವ ಕವಿಗಳು ಮೈಗೂಡಿಸಿಕೊಂಡು ಇನ್ನೂ ಹೆಚ್ಚು ಕೃತಿಗಳನ್ನು ರಚಿಸುವ ಮೂಲಕ ಅವರ ನೆನಪನ್ನು ಅಚ್ಚಳಿಯದಂತೆ ಉಳಿಸಿ-ಬೆಳೆಸಬೇಕೆಂದರು. ಈ ವೇದಿಕೆಯು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಕಲ್ಪತರು ವಿದ್ಯಾಸಂಸ್ಥೆಯ ಡಾ.ಸಿದ್ದಗಂಗಯ್ಯ ಹೊಲತಾಳ್ ಕುವೆಂಪು ವೈಚಾರಿಕ ಪ್ರಜ್ಞೆಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಪರಂಪರೆ ಮತ್ತು ವರ್ತಮಾನದ ಅರಿವಿನಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಹಿತ್ಯ ಬೆಳಕಾಗಬೇಕು. ಮಾನವೀಯತೆ ಮತ್ತು ಸಮಾನತೆ ಪಸರಿಸುವ ಬೀಜವಾಗಬೇಕು.ಕುವೆಂಪು ಸಾಹಿತ್ಯದಲ್ಲಿ ಪ್ರಕೃತಿ ಸೌಂದರ್ಯದ ಜತೆ ಸಾಮಾಜಿಕ ಸಂಘರ್ಷದ ಒಳ ನೋಟಗಳನ್ನು ಕಾಣಬಹುದು. ಅವರಿಗಿದ್ದ ಸಾಹಿತ್ಯ ಚಲನಶೀಲತೆ, ಚೈತನ್ಯವನ್ನು ಯುವ ಕವಿಗಳು ಗ್ರಹಿಸಬೇಕು, ಅಹಂಕಾರ ಗೆದ್ದು ಜೀವನ ಸಾರ್ಥಕತೆ ಹಾದು ತುಳಿಯಬೇಕೆಂದರು.
ಅಧ್ಯಕ್ಷತೆಯನ್ನು ಸಿರಿಗನ್ನಡ ವೇದಿಕೆ ತಾ.ಘಟಕದ ಅಧ್ಯಕ್ಷ ಕೆ.ಎಂ.ಪರಮೇಶ್ವರಯ್ಯ ವಹಿಸಿದ್ದರು. ನಿವೃತ್ತ ಶಿಕ್ಷಣಾಧಿಕಾರಿ ವೈ.ಕೆ. ಮಹಲಿಂಗಯ್ಯ, ವೇದಿಕೆ ಗೌರವಾಧ್ಯಕ್ಷ ಎಚ್.ಎಸ್. ಜಗದೀಶ್ ಮತ್ತಿತರರಿದ್ದರು. ಯುವಕವಿಗಳು ಸ್ವರಚಿತ ಕವನ ವಾಚಿಸಿದರು. ಸುಗಮ ಸಂಗೀತ ಗಾಯಕಿಯಾದ ಶ್ರೀಮತಿ ಶೈಲಜ ಶಿವಮೂರ್ತಿ ಸಂಗಡಿಗರು ಕುವೆಂಪು ರಚಿತ ಭಾವಗೀತೆಗಳನ್ನು ಹಾಡಿ ರಂಜಿಸಿದರು.
ಶ್ರೀನಿವಾಸಮೂರ್ತಿ ಸಂಗಡಿಗರು ಪ್ರಾರ್ಥಿಸಿ, ವೇದಿಕೆಯ ಸಂಚಾಲಕ ಎ.ಶಿವಪ್ರಕಾಶ್ ಸ್ವಾಗತಿಸಿ, ಶಿವಕುಮಾರ್ ಸಾರ್ಥವಳ್ಳಿ ನಿರೂಪಿಸಿ, ವಂದಿಸಿದರು.