ಬದುಕಿದರೆ ಜಿಎಸ್ಎಸ್ ರೀತಿ ಬದುಕಬೇಕು
ಪಾವಗಡ: ಬದುಕಿದರೆ ಜಿಎಸ್ಎಸ್ ತರ ಬದುಕಬೇಕು ಎಂದು ಸರ್ಕಾರಿ ಪಿಯಸಿ ಕಾಲೇಜು ಕನ್ನಡ ವಿಭಾಗ ಉಪನ್ಯಾಸಕ ಕಂಪ್ಲಪ್ಪ ಚನ್ನಸಾಗರ ಅಭಿಪ್ರಾಯಪಟ್ಟರು.
ಸರ್ವೋದಯ ಫೌಂಡೇಷನ್ ಟ್ರಸ್ಟ್ ಪಾವಗಡ, ಎಪಿಎಂಸಿ ಹಾಗೂ ವಾಕರ್ಸ್ ಕ್ಲಬ್ ಪಾವಗಡ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಪಟ್ಟಣದ ಎಪಿಎಂಸಿ ಸಭಾಗಣದಲ್ಲಿ ಏರ್ಪಡಿಸಿದ್ದ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ರಾಷ್ಟ್ರ ಕವಿ ಶಿವರುದ್ರಪ್ಪ ಅವರ ನಿಧನಕ್ಕೆ ಸಭೆ 2 ನಿಮಿಷ ಮೌನ ಆಚರಿಸಿದ ನಂತರ ಅವರು ಮಾತನಾಡಿದರು.
ರಾಷ್ಟ್ರಕವಿ ಶಿವರುದ್ರಪ್ಪ ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ಅಷ್ಟೆ ಅಲ್ಲ,ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಬದುಕಿನ ಒಳಗಡೆ ಅನ್ವೇಷಣೆ ಮಾಡಿ ಉತ್ತಮ ಕಾವ್ಯ, ಕವನಗಳನ್ನು ಸಾಹಿತ್ಯ ಲೋಕಕ್ಕೆ ಕಟ್ಟಿಕೊಟ್ಟ ಮೇರು ಕವಿ ಜಿಎಸ್ಎಸ್ ಎಂದು ಅವರು ಬಣ್ಣಿಸಿದರು. ಅಧ್ಯಕ್ಷತೆ ವಹಿಸಿದ ವಕೀಲ ನಾಗೇಂದ್ರಪ್ಪ, ಕಸಾಪ ಅಧ್ಯಕ್ಷ ಶಂಕರಪ್ಪ, ಪ್ರಾಂಶುಪಾಲ ಸಣ್ಣನಾಗಪ್ಪ, ಉಪನ್ಯಾಸಕ ಬಸವಲಿಂಗಪ್ಪ ಮುಂತಾದವರು ಜಿಎಸ್ಎಸ್ ಬಗ್ಗೆ ಮಾತನಾಡಿದರು. ರಾಮಕೃಷ್ಣನಾಯಕ್, ವೈ.ಎಸ್. ಹನುಮಂತರಾಯಪ್ಪ, ವೆಂಕಟರಾಮರೆಡ್ಡಿ, ಕಟ್ಟಾ ನರಸಿಂಹಮೂರ್ತಿ ಈರಣ್ಣ, ಸತೀಶ್ ಮುಂತಾವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.