ಬ್ಯಾಂಕ್ ನೌಕರ ಸಿದ್ದರಾಮಣ್ಣ ನಿಧನಕ್ಕೆ ಸಂತಾಪ
ತಿಪಟೂರು: ಪಟ್ಟಣದ ಮೈಸೂರು ಬ್ಯಾಂಕ್ನ ಕೃಷಿ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿದ್ದರಾಮಣ್ಣ ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರ ನಿಧನಕ್ಕೆ ಶಾಖಾ ವ್ಯವಸ್ಥಾಪಕರಾದ ರಿಷಿ ಚರಣ್, ಉಪ ವ್ಯವಸ್ಥಾಪಕ ನಾಯಕ್, ಕುಮಾರಸ್ವಾಮಿ, ಚಂದ್ರಯ್ಯ, ಮರುಳಪ್ಪ ಸಂತಾಪ ಸೂಚಿಸಿದ್ದಾರೆ.
ಯುವಕ ನೇಣಿಗೆ ಶರಣು
ತುರುವೇಕೆರೆ: ತಿಪಟೂರು ತಾಲೂಕಿನ ಗಂಗನಘಟ್ಟದ ನಿವಾಸಿ ದಿವಂಗತ ರಂಗಸ್ವಾಮಿ ಎನ್ನುವವರ ಮಗ ರಾಘವೇಂದ್ರ(28) ಸಮೀಪದ ಟಿ.ಹೊಸಳ್ಳಿ ಬಳಿ ನೇಣಿಗೆ ಶರಣಾಗಿದ್ದಾನೆ. ಈತ ಆಗಾಗ್ಗೆ ಮನೆ ಬಿಟ್ಟು ಅಲೆಮಾರಿಯ ರೀತಿ ಓಡಾಡಿಕೊಂಡಿದ್ದ ಎನ್ನಲಾಗಿದೆ. ರಾಘವೇಂದ್ರ ತನ್ನ ಪ್ಯಾಂಟಿಗೆ ಕಟ್ಟಿಕೊಳ್ಳುವ ಬೆಲ್ಟ್ನಿಂದಲೇ ನೇಣುಹಾಕಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈತ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದನೆಂದು ಹೇಳಲಾಗಿದೆ. ಸಿಪಿಐ ಕೃಷ್ಣಸ್ವಾಮಿ ಹಾಗೂ ಎಸೈ ರಾಚಯ್ಯ ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರು-ಬೈಕ್ ಡಿಕ್ಕಿ: ಯುವಕ ಸಾವು
ಗುಬ್ಬಿ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನ ತ್ಯಾಗಟೂರು ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ-206 ರಲ್ಲಿ ನಡೆದಿದೆ.
ಮೃತಪಟ್ಟರುವ ಯುವಕ ಸುನಿಲ್ ಕುಮಾರ್ (21) ಎಂದು ಗುರುತಿಸಲಾಗಿದೆ. ತುಮಕೂರು ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಸಂತೋಷ್ (20) ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಗುಬ್ಬಿ ಠಾಣೆಯಲ್ಲಿ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.