ವಿವಿಧೆಡೆ ಕುಡಿಯುವ ನೀರಿಗೆ ಹಾಹಾಕಾರ: ಗ್ರಾಪಂ ಸದಸ್ಯರಿಂದ ತಾಪಂ ಸಿಇಒ ತರಾಟೆ
ತುರುವೇಕೆರೆ: ತಾಲೂಕಿನ ಬಹುತೇಕ ಕಡೆ ಕುಡಿವ ನೀರಿಗೆ ಹಾಹಾಕಾರ ತಲೆದೋರಿದೆ. ಕುಡಿಯುವ ನೀರು ದೊರಕಿಸಿ ಕೊಡಿ ಎಂದು ಅಧಿಕಾರಿಗಳನ್ನು ಅಂಗಲಾಚುವ ಸ್ಥಿತಿ ಬಂದೊದಗಿದೆ.
ಕುಡಿವ ನೀರು ವಿತರಣೆ ಮಾಡಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆಪಾದಿಸಿ ತಾಲೂಕಿನ ಲೋಕಮ್ಮನಹಳ್ಳಿ ಹಾಗೂ ಮಾಯಸಂದ್ರದ ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷ ಹಾಗೂ ಸದಸ್ಯರು ತಾಪಂ ಸಿಇಒ ಅವರನ್ನು ತರಾಟೆಗೆ ತೆಗೆದುಕೊಂಡರು.
ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಿ.ಕಲ್ಲಹಳ್ಳಿ ಗ್ರಾಮದಲ್ಲಿ ಕಳೆದ ಐದಾರು ವರ್ಷಗಳಿಂದ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುತ್ತಿದ್ದ ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆ ಕಳೆದ 2010 ರಲ್ಲಿ ನೀಡಿದ್ದ ವರದಿ ಆಧರಿಸಿ ಧಿಡೀರ್ ಕಾರ್ಯತತ್ಪರತೆಗೆ ಇಳಿದ ಇಒ ಹನುಮಂತಯ್ಯ ಸಿಬ್ಬಂದಿಗೆ ಸೂಚನೆ ನೀಡಿದ ಮೇರೆಗೆ ಕೊಳವೆ ಬಾವಿಗೆ ಅಳವಡಿಸಲಾಗಿದ್ದ ಮೋಟಾರ್ ಪಂಪ್ ಹೊರತೆಗೆದರು. ಆದರೆ, ಅದೇ ಗ್ರಾಮದಲ್ಲಿ ಕೊರೆಯಲಾಗಿದ್ದ ಕೊಳವೆ ಬಾವಿಗೆ ಮೋಟಾರ್ ಪಂಪ್ ಅಳವಡಿಸುವುದಾಗಿ ಹೇಳಿದ್ದ ಅಧಿಕಾರಿಗಳು ಮಾತಿಗೆ ತಪ್ಪಿದರು. ಕಾರಣ ಇನ್ನೂ ಬೆಸ್ಕಾಂ ನಿಂದ ವಿದ್ಯುತ್ ಸಂಪರ್ಕವಾಗಿರಲಿಲ್ಲ. 13 ದಿನ ಕಳೆದರೂ, ಗ್ರಾಪಂ ಕಾರ್ಯದರ್ಶಿಯಾಗಲಿ ಅಥವಾ ಮೋಟಾರ್ ಬಿಚ್ಚಿಸಿಕೊಂಡು ಹೋಗಿದ್ದ ಇಒ ಆಗಲಿ ಗ್ರಾಮಕ್ಕೆ ಕುಡಿವ ನೀರನ್ನು ಒದಗಿಸಿರಲಿಲ್ಲ. ಗ್ರಾಮದಲ್ಲಿ ಕುಡಿವ ನೀರಿಗೆ ಹಾಹಾಕಾರ ಒದಗಿತು. ಈ ನಿಟ್ಟಿನಲ್ಲಿ ಅಧಿಕಾರಿಗಳನ್ನು ಬೇಡಿಕೊಂಡರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಇಂದು ಲೋಕಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಗಳಮ್ಮ ಹಾಗೂ ಉಪಾಧ್ಯಕ್ಷ ಶ್ರೀನಿವಾಸ್ ಹಾಗೂ ಎಲ್ಲಾ ಸದಸ್ಯರು ಇಒ ಹನುಮಂತಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಮ ಪಂಚಾಯ್ತಿ ಸದಸ್ಯರ ಅಹವಾಲು ಆಲಿಸಿದ ಇಒ ಕೂಡಲೇ ತೆರವು ಮಾಡಿದ್ದ ಮೋಟಾರ್ ಪಂಪ್ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಮಾಯಸಂದ್ರದಲ್ಲಿ ನೀರಿಗೆ ಪರದಾಟ - ಬೋರ್ವೆಲ್ ಬತ್ತಿ ಹೋಗಿವೆ. ಗ್ರಾಮಕ್ಕೆ ಕುಡಿಯಲು ನೀರು ಒದಗಿಸಲು ತಮ್ಮಿಂದ ಸಾಧ್ಯವೇ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಂತಿ ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರು ಇಒ ಅವರನ್ನು ತರಾಟೆಗೆ ತೆಗೆದುಕೊಂಡರು. ಸ್ವತ- ಪಿಡಿಒ ಮಂಜಮ್ಮ ಸಹ ಇಒ ಅವರಿಗೆ ಪರಿಸ್ಥಿತಿ ವಿವರಣೆ ನೀಡಿದರು. ಚಿಕ್ಕಶೆಟ್ಟಿಕೆರೆಯ ಎಲ್ಲಾ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಜನರಿಗೆ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಆದ್ದರಿಂದ ಕೂಡಲೇ ನೀರಿನ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು. ಟ್ಯಾಂಕರ್ ನಿಂದಾದರೂ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಿ ಎಂದು ಆಗ್ರಹಿಸಿದರು. ತಹಸೀಲ್ದಾರ್ ಅವರೊಂದಿಗೆ ಚರ್ಚೆ ನಡೆಸಿ ಟ್ಯಾಂಕರ್ ಮೂಲಕ ನೀರು ವಿತರಣೆ ಮಾಡುವ ಕಾರ್ಯ ಮಾಡುವ ಭರವಸೆಯನ್ನು ಇಒ ಹನುಮಂತಯ್ಯ ನೀಡಿದ್ದ ಮೇರೆಗೆ ಗ್ರಾಮ ಪಂಚಾಯ್ತಿ ಸದಸ್ಯರು ತೆರಳಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.