ಹಲವು ಯೋಜನೆ ಪ್ರಾರಂಭೋತ್ಸವ
ತುಮಕೂರು: ಇಲ್ಲಿನ ತುಮಕೂರು ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನಲ್ಲಿ ರೈತರಿಗೆ ಮತ್ತು ಸದಸ್ಯರಿಗೆ ನಿಶ್ಚಿತ ಠೇವಣಿ, ಪಿಗ್ಮಿ ಮತ್ತು ಚಿನ್ನಾಭರಣ ಸಾಲ ಯೋಜನೆಗಳ ಪ್ರಾರಂಭೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಸ್ಕರ್ಡ್ ಬ್ಯಾಂಕ್ ಅಧ್ಯಕ್ಷ ಎ.ಆರ್. ಶಿವರಾಮ್, ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್. ವೀರೇಶ್, ಸಹಕಾರ ಸಂಘಗಳ ಉಪನಿಬಂಧಕ ಬಾಲಶೇಖರ್ ಮುಂತಾದವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಇಂದು ಕಣ್ಣಿನ ತಪಾಸಣೆ ಶಿಬಿರ
ಬಾಲಗಂಗಾಧರನಾಥ ಸ್ವಾಮೀಜಿ ಸ್ಮರಣಾರ್ಥ ಸೋಮವಾರ ಮರಳೂರು ದಿಣ್ಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಆಧುನಿಕ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಶಿಬಿರವನ್ನು ನಂಜಾವಧೂತ ಸ್ವಾಮೀಜಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಆದಿಚುಂಚನಗಿರಿ ಶಾಖ ಮಠದ ಶಿವಕುಮಾರನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ಎಂ.ಆರ್. ಹುಲಿನಾಯ್ಕರ್ ಆಗಮಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಜೆಡಿಎಸ್ ಮುಖಂಡ ಕೆ.ಬಿ. ಬೋರೇಗೌಡ ಆಯೋಜಿಸಿದ್ದಾರೆ.
ಕುರಿ, ಮೇಕೆ ಸಾಕಾಣಿಕೆ ತರಬೇತಿ
ಇಲ್ಲಿನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದಲ್ಲಿ ಜ. 7 ಮತ್ತು 8 ರಂದು ಎಲ್ಲಾ ವಯೋವುತಿಯ ಸಾರ್ವಜನಿಕರಿಗೆ ಕುರಿ ಮತ್ತು ಮೇಕೆ ಸಾಕಾಣಿಕಾ ತರಬೇತಿಯನ್ನು ಉಚಿತವಾಗಿ ಏರ್ಪಡಿಸಿದೆ. ಆಸಕ್ತರು ಸಹಾಯಕ ನಿರ್ದೇಶಕರ ಕಚೇರಿ, ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ, ಇಲ್ಲಿ ಜ.7 ರಂದು ಬೆಳಗ್ಗೆ 10.30 ಕ್ಕೆ ಹಾಜರಿರಲು ಕೋರಲಾಗಿದೆ.
6ರೊಳಗೆ ಅರ್ಜಿ ಸಲ್ಲಿಸಲು ಸೂಚನೆ
ಪದವಿ ಮತ್ತು ಬಿಇಡಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ತಾತ್ಕಾಲಿಕ ಅರ್ಹತಾ ಪಟ್ಟಿಗೆ ಶಿಕ್ಷಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಅಂತಹ ಆಕ್ಷೇಪಣೆಗಳು ಇದ್ದಲ್ಲಿ ಜ. 6 ರೊಳಗೆ ಸಲ್ಲಿಸಲು ಕೋರಿದೆ. ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಮಾನ್ಯ ಮಾಡಲಾಗದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ. ಮೋಹನ್ ಕುಮಾರ್ ತಿಳಿಸಿದ್ದಾರೆ.