ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಕ್ಷಾತೀತ ಸೇವೆಯಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯ

Mainashree
Updated On : 4 Feb 2013, 9:25 am

ಶಿರಾ: ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಪಕ್ಷಾತೀತವಾಗಿ ಗ್ರಾಮಗಳ ಉದ್ಧಾರಕ್ಕಾಗಿ ಜನರು ಶ್ರಮಿಸಿದಾಗ ಅಭಿವೃದ್ಧಿ ಸಾಧ್ಯ ಎಂದು ಸಾಹಿತಿ, ಪಂಪ ಪ್ರಶಸ್ತಿ ಪುರಸ್ಕೃತ  ಬರಗೂರು ರಾಮಚಂದ್ರಪ್ಪ ತಿಳಿಸಿದರು.
ತಾಲೂಕಿನ ಅವರ ಹುಟ್ಟೂರಾದ ಬರಗೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಭವನ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಾನು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರೂ ಈ ಊರಿಗೆ ಮಗನೆ ಹೊರತು ಯಾವುದೇ ದೊಡ್ಡ ವ್ಯಕ್ತಿಯಲ್ಲ ಎಂದು ತಿಳಿಸಿ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ನನಗೆ ಋಣ ತೀರಿಸಲು ಇದೊಂದು ಮಾರ್ಗ. ಸಾಂಸ್ಕೃತಿಕ ಭವನ ನಿರ್ಮಿಸುವ ಮೂಲಕ ಈ ಗಡಿ ಭಾಗದ ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿಯುವ ಕೆಲಸ ಸುತ್ತ ಮುತ್ತಲ ಗ್ರಾಮಗಳ ಜನರಿಂದ ಆಗಬೇಕಿದೆ ಎಂದರು.
ಶಾಸಕ ಟಿ.ಬಿ. ಜಯಚಂದ್ರ ಅವರು ಮಾತನಾಡಿ ರಾಜ್ಯದ ಗಡಿ ಭಾಗದಲ್ಲಿರುವ ಆಂಧ್ರಪ್ರದೇಶದ ಮಡಕಶಿರಾ ಹಾಗೂ ಕರ್ನಾಟಕದ ಶಿರಾ ಜನರು ಅತ್ಯಂತ ಸಹಬಾಳ್ವೆ ಸಹಕಾರದಿಂದ ಜೀವನ ನಡೆಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಹರ್ಷದಾಯಕವಾಗಿದೆ ಎಂದರು.
ತಾಲೂಕುಗಳ ಅಭಿವೃದ್ಧಿಗೆ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದಿಂದ ಉತ್ತಮ ಯೋಜನೆ ಹಮ್ಮಿಕೊಳ್ಳುತ್ತಿದ್ದು
ಇದು ಎರಡೂ ರಾಜ್ಯಗಳ ಮಧ್ಯೆ ಸಾಮರಸ್ಯ, ಸಮಾನತೆ ಹಾಗೂ ಸಹಬಾಳ್ವೆ ಬೆಳೆಸಲು ಸಹಾಯಕವಾಗುತ್ತಿದೆ. ಹಣದ ಕೊರತೆ ಇದ್ದಲ್ಲಿ ಈ ಸಾಂಸ್ಕೃತಿಕ ಭವನ ನಿರ್ಮಿಸಲು ಶಾಸಕರ ಅನುದಾನದಿಂದಲೂ ಹಣಕಾಸಿನ ನೆರವು ನೀಡುವುದಾಗಿ ತಿಳಿಸಿದರು.
ಅನುದಾನ ಮಂಜೂರು ಮಾಡಲು ಕ್ರಮ: ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಶಿವಪ್ರಸಾದ್ ಮಾತನಾಡಿ ರಾಜ್ಯದ 52 ತಾಲೂಕುಗಳಲ್ಲೂ ಸಂಚರಿಸಿ ಹಿಂದುಳಿದಿರುವ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಬರಗೂರು ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ಗಂಗಮ್ಮ ಸಿದ್ದಹನುಮಯ್ಯ, ಉಪಾಧ್ಯಕ್ಷ ಉದಯಶಂಕರ್, ಕಾರ್ಯ ನಿರ್ವಹಣಾಧಿಕಾರಿ
ಡಾ.ವಿ. ವೇದಮೂರ್ತಿ, ಭೂಮಿ ಬಳಗದ ಅಧ್ಯಕ್ಷ ಸೋಮಣ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬರಗೂರು ತಿಪ್ಪೇಸ್ವಾಮಿ, ಜಿಲ್ಲಾ ಯೋಜನಾ ನಿರ್ದೆಶಕ ರಾಜಶೇಖರ್ ಮತ್ತಿರರು ಹಾಜರಿದ್ದರು.
ಸವಿನೆನಪು: ಡಾ. ಬರಗೂರು ರಾಮಚಂದ್ರಪ್ಪ ತಾವು ಓದಿದ ಶಿರಾ ತಾಲೂಕಿನ ಬರಗೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಬಾಲ್ಯದ ನೆನಪುಗಳನ್ನು ಅಲ್ಲಿನ ಶಿಕ್ಷಕರೊಂದಿಗೆ ಮೆಲುಕು ಹಾಕಿದರು.
ತಾವು ಓದಿದ ಕೊಠಡಿ, ಆಟವಾಡಿದ ಜಾಗಗಳಲ್ಲಿ ಭೇಟಿ ನೀಡಿ ಗೆಳೆಯರೊಂದಿಗೆ ಕಳೆದಿದ್ದ ಕ್ಷಣಗಳನ್ನು ನೆನಪು ಮಾಡಿಕೊಂಡು ಜೊತೆಯಲ್ಲಿದ್ದ ಅಧಿಕಾರಿಗಳೊಂದಿಗೆ ಕೆಲ ಕಾಲ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement