ಹಳ್ಳಿಗಳಿಗೆ ಹಗಲಲ್ಲಿ ಕನಿಷ್ಠ 3 ಗಂಟೆ ವಿದ್ಯುತ್ ಒದಗಿಸಿ
ತಿಪಟೂರು: ಸತತವಾಗಿ ಕಳೆದ ಐದಾರೂ ವರ್ಷಗಳಿಂದ ಕಲ್ಪತರು ನಾಡಾದ ತಿಪಟೂರು ತಾಲೂಕು ಸರಿಯಾಗಿ ಮಳೆ ಬೆಳೆ ಇಲ್ಲದೆ ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ಅಂತರ್ ಜಲದ ಕೊರತೆ ತೀವ್ರವಾಗಿ ಕಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ತಮಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನೇ ನೆಚ್ಚಿಕೊಳ್ಳುತಿದ್ದಾರೆ. ಆದರೆ ಬೆಸ್ಕಾಂ ಗ್ರಾಮೀಣ ಭಾಗಕ್ಕೆ ಹಗಲು ವೇಳೆ ಕೇವಲ ಒಂದು ಗಂಟೆಯಷ್ಟೇ ತ್ರೀ ಫೇಸ್ ವಿದ್ಯುತ್ ಕೊಡುತ್ತಿದ್ದು, ಇದರಿಂದ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರತಪಿಸುವಂತಾಗಿದೆ. ತಾಲೂಕು ಆಡಳಿತ ಎಕ್ಕುಟ್ಟಿ ಹೋಗಿರುವುದಕ್ಕೆ ಇದೇ ಸಾಕ್ಷಿ ಎಂದು ಕರ್ನಾಟಕ ಜನತಾ ಪಕ್ಷದ ಮುಖಂಡರಾದ ಟಿ.ಎಸ್. ಲೋಕೇಶ್ವರ ತಿಳಿಸಿದ್ದಾರೆ.
ತುಂಬುತ್ತಿಲ್ಲ: ಇದಕ್ಕೂ ಮೊದಲು ರಾತ್ರಿ ಮತ್ತು ಹಗಲು 3ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ ತಿಂಗಳಿಂದ ಹಗಲು ವೇಳೆ ಏಕಾಏಕಿ ಒಂದು ಗಂಟೆ ವಿದ್ಯುತ್ ನೀಡಲಾಗುತ್ತಿರುವುದರಿಂದ ಹಳ್ಳಿಗಳ ಮಿನಿಟ್ಯಾಂಕ್‌ಗಳು ಒಂದು ಗಂಟೆ ನೀಡುತ್ತಿರುವ ಕರೆಂಟ್‌ನಿಂದ ತುಂಬುತ್ತಿಲ್ಲ. ಜೊತೆಗೆ ಅಂತರ್ಜಲ ತೀರಾ ಆಳಕ್ಕೆ ಹೋಗಿದ್ದು ನೀರು ಕಡಿಮೆಯಾಗಿದೆ. ಜೊತೆಗೆ ಕರೆಂಟ್ ನೀಡುವ ಸಮಯ ಏನೇನೂ ಸಾಲದಾಗಿದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ಬೇಸಿಗೆಗಿಂತ ಮುಂಚೆಯೇ ಹೆಚ್ಚಾಗಿದ್ದು, ಜನರು ತತ್ತರಿಸುವಂತಾಗಿದೆ. ಅಲ್ಲದೆ ಗ್ರಾಮಗಳಲ್ಲಿ ಒಂದೊಂದೆ ಬೋರ್‌ವೆಲ್‌ಗಳು ಇರುವುದರಿಂದ ಒಂದು ಗಂಟೆಯಷ್ಟೇ ಮೋಟರ್ ಓಡುವುದರಿಂದ ಎಸ್ಸಿ, ಎಸ್ಟಿ ಕಾಲೋನಿಗಳಲ್ಲಿರುವ ಟ್ಯಾಂಕ್‌ಗಳಿಗೂ ನೀರು ಹರಿಯುತ್ತಿಲ್ಲ. ನೀರಿನ ಸಮಸ್ಯೆ ಪರಿಹರಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಇದರಿಂದ ಗ್ರಾಮ ಪಂಚಾಯಿತಿಯ ಸದಸ್ಯರು ಜನರ ಆಕ್ರೋಶ ಎದುರಿಸುವಂತಾಗಿದೆ.
ಬೆಸ್ಕಾಂಗೆ ಮುತ್ತಿಗೆ: ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಗ್ರಾಮಸ್ಥರು ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಬೆಸ್ಕಾಂಗೆ ಮುತ್ತಿಗೆ ಹಾಕುವ ಸನ್ನಿವೇಶವುಂಟಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಬೆಸ್ಕಾಂ ಹಗಲು ವೇಳೆ ಕನಿಷ್ಠ ಮೂರು ಗಂಟೆಯಾದರೂ ವಿದ್ಯುತ್ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಜ. 11ರ ಸೋಮವಾರ ನಗರದ ಬೆಸ್ಕಾಂ ಉಪವಿಭಾಗ ಕಚೇರಿ ಮುಂದೆ ಅನಿವಾರ್ಯವಾಗಿದ ಪ್ರತಿಭಟನೆ, ಧರಣಿಯನ್ನು ತಾಲೂಕು ಕೆಜೆಪಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುವುದೆಂದು ಲೋಕೇಶ್ವರ ತಿಳಿಸಿದ್ದಾರೆ.
ಈ ಹೋರಾಟಕ್ಕೆ ರೈತರು,ಪ್ರಜ್ಞಾವಂತ ನಾಗರಿಕರು ಮತ್ತು ತಾಲೂಕಿನ ಜನಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಜನಪರ,ರೈತಪರ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.