'ಅಭಿವೃದ್ಧಿ ಮೂಲ ಮಂತ್ರವಾಗಲಿ'
ಹೊಳೆನರಸೀಪುರ: ಜನಪ್ರತಿನಿಧಿಗಳು ಗ್ರಾಮಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಧ್ಯೇಯವನ್ನು ತಮ್ಮ ಪ್ರಮುಖ ಗುರಿಯೆಂದು ಭಾವಿಸಿದಾಗ ಮಾತ್ರವೇ ಗ್ರಾಮಗಳ ಉದ್ಧಾರ ಸಾಧ್ಯವಾಗುತ್ತದೆ ಎಂದು ಅರಕಲಗೂಡು ಶಾಸಕ ಎ.ಮಂಜು ಅಭಿಪ್ರಾಯಪಟ್ಟರು. ತಾಲೂಕಿನ ಹಳ್ಳಿಮೈಸೂರು ಹೋಬಳಿಯಲ್ಲಿನ ನೇರಲೆ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ 40.48ಲಕ್ಷ ರು ವೆಚ್ಚದ ಕಾಮಗಾರಿ ಹಾಗೂ ನೇರಲೆ, ಕೋಗಿಲಹಳ್ಳಿ ರಸ್ತೆಯನ್ನು ಪಿ.ಎಂ.ಜಿ.ಆರ್.ವೈ ಯೋಜನೆಯಡಿಯಲ್ಲಿ 93 ಲಕ್ಷ ರು ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ರಾಜಕಾರಣವನ್ನು ಚುನಾವಣೆಯ ಸಂದರ್ಭಕ್ಕೆ ಮಾತ್ರವೇ ಮೀಸಲಿಟ್ಟು, ಉಳಿದ ಅವಧಿಯಲ್ಲಿ ತಮ್ಮ ಕ್ಷೇತ್ರ ಎಲ್ಲ ವರ್ಗದ ಜನರಿಗೂ ಸಹಕರಿಯಾಗುವ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುವತ್ತ ಗಮನ ನೀಡುವುದು ನಿಜವಾದ ಜನಪ್ರತಿನಿಧಿಯ ಕಾರ್ಯವಾಗಿದೆ ಎಂದರು.