ಕೆ.ಬಿ.ಕ್ರಾಸ್ನಲ್ಲಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಕ್ಕೆ ಒತ್ತಾಯ
ತಿಪಟೂರು: ತಾಲೂಕಿನ ಹೋಬಳಿ ಕೇಂದ್ರವಾದ ಕಿಬ್ಬನಹಳ್ಳಿ ಕ್ರಾಸ್ನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಬೇಕೆಂದು ನಾಗರಿಕ ಹಿತರಕ್ಷಣಾ ಸಮಿತಿ ಪರವಾಗಿ ವಕೀಲರು ಹಾಗೂ ನೋಟರಿ ಪಬ್ಲಿಕ್ನ ಎಸ್.ಜಯಣ್ಣ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.
ತುರುವೇಕೆರೆ, ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿ ತಾಲೂಕುಗಳಿಗೆ ಕಿಬ್ಬನಹಳ್ಳಿ ಕ್ರಾಸ್ ನೇರ ಸಂಪರ್ಕ ಕಲ್ಪಿಸಿರುವಂಥದು. ಈ ನಿಟ್ಟಿನಲ್ಲಿ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಸಾಕಷ್ಟು ಗ್ರಾಮಗಳಿಗೆ ಹತ್ತಿರವಾದುದು. ಇಲ್ಲಿಂದ ಪ್ರತಿದಿನ 25 ಕಿ.ಮೀ. ದೂರವಿರುವ ತಿಪಟೂರಿನ ಪ್ರಥಮ ದರ್ಜೆ ಕಾಲೇಜುಗಳಿಗೆ ಹೋಗಲು ನೂರಾರು ವಿದ್ಯಾರ್ಥಿಗಳು ಬಸ್ಗಳಿಗಾಗಿ ಗಂಟೆಗಟ್ಟಲೆ ಕಾಯುವುದು ನರಕಯಾತನೆಯಾಗಿದೆ. ಆದರೆ, ಸಮಯಕ್ಕೆ ಸರಿಯಾಗಿ ಬಸ್ಸುಗಳು ಸಿಗದಿರುವುದರಿಂದ ಈ ನಿಟ್ಟಿನಲ್ಲಿ ಇಲ್ಲಿನ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ವಕೀಲ ಹಾಗೂ ನೋಟರಿ ಜಯಣ್ಣ ಕಳವಳ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಸರ್ಕಾರದ ಆಶಯದಂತೆ ಹೋಬಳಿಗೊಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಂದುವ ನಿಯಮವಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ 4 ತಾಲೂಕುಗಳ ಸಂಗಮ ಸ್ಥಳವಾದ ಕೆ.ಬಿ. ಕ್ರಾಸ್ನಲ್ಲಿ ಕಾಲೇಜು ತೆರೆಯಲು ಜನಪ್ರತಿನಿಧಿಗಳು ಕೂಡಲೇ ಸರ್ಕಾರದ ಮೇಲೆ ಒತ್ತಡ ಹಾಕಿ ಕಾಲೇಜು ಸ್ಥಾಪಿಸಿದಲ್ಲಿ ಈ ಭಾಗದಲ್ಲಿರುವ ಬಹುತೇಕ ರೈತಾಪಿ ವರ್ಗದ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ದೊರೆಯುವುದು. ಹಣ, ಸಮಯ ವ್ಯರ್ಥವಾಗುವುದೂ ತಪ್ಪುತ್ತದೆ ಎಂದು ಜಯಣ್ಣ ಒತ್ತಾಯಿಸಿದ್ದಾರೆ.