ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತೊಗರಿಘಟ್ಟಕ್ಕೆ ಬಿಬಿಎಂಪಿ ಕಸ ಬೇಡ

Rashmi Kasaragodu
Updated On : 6 Feb 2013, 11:42 am

ತುಮಕೂರು:  ಕೊರಟಗೆರೆ ಬಳಿಯ ತೊಗರಿಘಟ್ಟ ಗ್ರಾಮಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಸ ಹಾಕುವ ನಿರ್ಣಯ ವಿರೋಧಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಜಂಟಿಯಾಗಿ ಗ್ರಾಮಸ್ಥರೊಂದಿಗೆ ತೊಗರಿಘಟ್ಟದಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಸಹಿ ಸಂಗ್ರಹಿಸಿ, ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಬೆಂಗಳೂರು ಮಹಾನಗರ ಪಾಲಿಕೆ ತೊಗರಿಘಟ್ಟದ ಬಳಿಯಿರುವ ಆದಿತಿಮ್ಮಪ್ಪನ ದೇವಸ್ಥಾನದ ಸುತ್ತಲಿನ 600 ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸುವ ಸಂಬಂಧ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಈ ಸ್ಥಳದಲ್ಲಿ ಅರಣ್ಯ ಮತ್ತು ತೋಟಗಾರಿಕೆ ಹಾಗೂ ಕುಡಿಯುವ ನೀರಿನ ಕೊಳವೆ ಬಾವಿಗೆಳೇ ಹೆಚ್ಚು ಇರುವದರಿಂದ ಕಸ ವಿಲೇವಾರಿ ಘಟಕ ಸ್ಥಾಪಿಸಿದರೆ ನೀರು ಕಲುಷಿತಗೊಳ್ಳುತ್ತದೆ. ಮಾತ್ರವಲ್ಲದೆ, ಈ ಸಂಬಂಧ ಪರಿಸರ ಮಾಲಿನ್ಯ, ವಾಯು ಮಾಲಿನ್ಯ ಇಲಾಖೆ ಆಕ್ಷೇಪಣೆ ಸಲ್ಲಿಸಿದ್ದರೂ ಸಹ ಬಿಬಿಎಂಪಿ ಈ ಸ್ಥಳದಲ್ಲೇ ಕಸ ವಿಲೇವಾರಿ ಘಟಕ ಸ್ಥಾಪಿಸಿಯೇ ತೀರುತ್ತೇವೆ ಎಂದು ಹಠಮಾರಿ ಧೋರಣೆ ಅನುಸರಿಸುತ್ತಿದೆ ಎಂದು ಡಿವೈಎಫ್ಐ ಹಾಗೂ ಕೆಪಿಆರ್ಎಸ್ ಮುಖಂಡರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದ ಸುತ್ತಮುತ್ತಲಿನ 10 ರಿಂದ 20 ಕಿಮೀ ವರೆಗೂ ವಾಯುಮಾಲಿನ್ಯ ಹದಗೆಟ್ಟು, ಹಳ್ಳಿಗಳಲ್ಲಿರುವ ಜನ - ಜಾನುವಾರುಗಳಿಗೆ ರೋಗ - ರುಜಿನಗಳು ಹರಡಿ, ಹೆಚ್ಚಾಗುತ್ತವೆ. ಜತೆಗೆ ಈ ಪ್ರದೇಶದಲ್ಲಿ ಹರಿಯುವ ಗರುಡಾಚಲ ಹಾಗೂ ಜಯಮಂಗಲಿ ನದಿ ಸೇರಿದಂತೆ ಸುತ್ತಮುತ್ತಲಿನ ಅಂತರ್ಜಲ ಸಹ ಕಲುಷಿತಗೊಳ್ಳುವುದರ ಜತೆಗೆ ಸುತ್ತಲಿನ ಕೃಷಿ ಚಟುವಟಿಕೆ ಹಾಗೂ ಗ್ರಾಮಗಳಲ್ಲಿ ವಾಸಿಸುವ ಜನತೆಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಪೆಟ್ಟು ಬೀಳಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಗ್ರಾಮಸ್ಥರು,  ಕೆಪಿಆರ್ಎಸ್, ಡಿವೈಎಫ್ಐ ಮುಖಂಡರು ತಿಳಿಸಿದ್ದಾರೆ.
ಸಣ್ಣ, ಅತಿ ಸಣ್ಣ ರೈತರು ಬೀದಿಪಾಲು:  ತೊಗರಿಘಟ್ಟದಲ್ಲಿ ಸಣ್ಣ, ಅತಿ ಸಣ್ಣ ರೈತರು ತುಂಡು ಭೂಮಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಇರುವ ಅಲ್ಲ-ಸ್ವಲ್ಪ ಭೂಮಿಯಲ್ಲೇ ಅಡಿಕೆ, ತೆಂಗು, ಮಾವು, ಬಾಳೆ, ತರಕಾರಿ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಕಸ ವಿಲೇವಾರಿ ಘಟಕ ಸ್ಥಾಪನೆಗೊಂಡಲ್ಲಿ ಬೀದಿಗೆ ಬೀಳಲಿದ್ದಾರೆ ಎಂದು ಕೆಪಿಆರ್ಎಸ್, ಡಿವೈಎಫ್ಐ ತಿಳಿಸಿವೆ.
ಘಟಕ ಸೂಕ್ತವಲ್ಲ, ಡಿಸಿ ವರದಿ:  ತೊಗರಿಘಟ್ಟದಿಂದ ಪಾದಯಾತ್ರೆಯಲ್ಲಿ ಸಹಿ ಸಂಗ್ರಹಿಸಿ ಬಂದ ಗ್ರಾಮಸ್ಥರು, ಕೆಪಿಆರ್ಎಸ್, ಡಿವೈಎಫ್ಐ ಮುಖಂಡರಿಂದ ಜಿಲ್ಲಾಧಿಕಾರಿ ಆರ್.ಕೆ. ರಾಜು ಮನವಿ ಪತ್ರ ಪಡೆದರು.
ನಂತರ ಮಾತನಾಡಿದ ಆರ್.ಕೆ. ರಾಜು, ತಾವು ತೊಗರಿಘಟ್ಟ ಗ್ರಾಮ ಸೇರಿದಂತೆ ಸುತ್ತಮುತ್ತ ಸ್ಥಳ ಪರಿಶೀಲನೆ ನಡೆಸಿರುವುದಾಗಿಯೂ, ಈ ಭಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಸೂಕ್ತವಲ್ಲ ಎಂದು, ಈ ಭಾಗದಲ್ಲಿ ಅತಿ ಸಣ್ಣ, ಸಣ್ಣ ರೈತರು ಕೃಷಿಯನ್ನೇ ನಂಬಿ ಜೀವನೋಪಾಯ ನಡೆಸುತ್ತಿದ್ದಾರೆ. ಗ್ರಾಮಸ್ಥರೊಂದಿಗೆ ತಾವು ಮಾತನಾಡಿದ ವೇಳೆ ಕಸ ವಿಲೇವಾರಿ ಘಟಕ ಬೇಡವೇ, ಬೇಡವೆಂದೂ ಮಾಹಿತಿ ತಿಳಿದು ಬಂದಿದ್ದಾಗಿ ತಿಳಿಸಿದರು.
ತಮ್ಮ ಸ್ಥಳ ಪರಿಶೀಲನೆ ವರದಿಯನ್ನು, ಕಂದಾಯ ಇಲಾಖೆ ಪ್ರಿನ್ಸಿಪಲ್ ಸೆಕ್ರೆಟರಿಗೆ ಹಾಗೂ ಮುಖ್ಯಮಂತ್ರಿಗಳು ಕರೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಈಗಾಗಲೇ ನೀಡಿರುವುದಾಗಿಯೂ ಪ್ರತಿಭಟನಾಕಾರರಿಗೆ ತಿಳಿಸಿದರು.
ಪ್ರತಿಭಟನೆ ಹಾಗೂ ಪಾದಯಾತ್ರೆಯ ನೇತೃತ್ವವನ್ನು ಡಿವೈಎಫ್ಐನ ಜಿಲ್ಲಾ ಸಂಚಾಲಕ ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷ ಎಂ.ಎಸ್. ಮಂಜುನಾಥ್, ಕೊರಟಗೆರೆ ತಾಲೂಕು ಅಧ್ಯಕ್ಷ ಎಂ.ರಂಗನಾಥ್, ಕಾರ್ಯದರ್ಶಿ ಎಂ.ಜಿ. ಮಂಜುನಾಥ್, ಖಜಾಂಚಿ ಎಂ.ಆರ್. ನಾಗರಾಜು, ಕೆಪಿಆರ್ಎಸ್ ಜಿಲ್ಲಾ ಸಹ ಸಂಚಾಲಕ ನೌಷಾದ್ ಸೆಹಗನ್, ತಾಲೂಕು ಸಹ ಸಂಚಾಲಕ ಸುರೇಶ್, ತಾಲೂಕು ಸಹ ಸಂಚಾಲಕ ರಾಮಚಂದ್ರಪ್ಪ, ರೈತ ಮುಖಂಡರಾದ ಟಿ.ಪಿ. ವಿಜಯನರಸಿಂಹ, ಕೃಷ್ಣಪ್ಪ ಇತರರು ವಹಿಸಿದ್ದರು.
ತೊಗರಿಘಟ್ಟದಿಂದ ನಡೆದ ಪಾದಯಾತ್ರೆಯಲ್ಲಿ ಡಿವೈಎಫ್ಐ ಹಾಗೂ ಕೆಪಿಆರ್ಎಸ್ ಕಾರ್ಯಕರ್ತರಾದ ರಂಗನಾಥ, ಎಂ.ಜಿ. ಮಂಜುನಾಥ್, ನೌಷಾದ್ ಸೆಹಗನ್, ರವಿಕುಮಾರ್, ಸುರೇಂದ್ರನಾಥ್, ನಾಗರಾಜು, ಸುರೇಶ್, ಮಂಜುನಾಥ್, ಶಿವಕುಮಾರ್, ರಾಘವೇಂದ್ರ, ಎಸ್ಎಫ್ಐ ಶಿವಣ್ಣ ಇತರರು ವಹಿಸಿದ್ದರು.
ಡಿಸಿ ಕಚೇರಿ ಎದುರು ನಡೆದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಕೆಪಿಆರ್ಎಸ್ ಸಂಚಾಲಕ ಬಿ. ಉಮೇಶ್, ನೌಷಾದ್ ಸೆಹಗನ್, ರೈತ ಮುಖಂಡ ನಾರಾಯಣ್, ಇತರರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement