ಅಕ್ಕಿ ಸಂತೆ ಆರಂಭ-ಇಂದು ತುಮಕೂರಿನಲ್ಲಿ ಸಂತೆಗೆ ಅಧಿಕೃತ ಚಾಲನೆ
ವಿಧಾನಸಭೆ: ಅಕ್ಕಿ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಅಕ್ಕಿ ಸಂತೆ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಶುಕ್ರವಾರ ತುಮಕೂರಿನಲ್ಲಿ ಸಂತೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಯೋಗದೊಂದಿಗೆ ಅಕ್ಕಿ ಗಿರಣಿ ಮಾಲಿಕರೇ ಅಕ್ಕಿ ಸಂತೆ ನಡೆಸಲಿದ್ದು, 37ಕ್ಕೆ ಸೋನಾ ಮಸೂರಿ ಅಕ್ಕಿಯನ್ನು ನಾಗರಿಕರಿಗೆ ವಿತರಿಸಲಿದ್ದಾರೆ ಎಂದು ಇಲಾಖೆ ಸಚಿವ ಡಿ.ಎನ್. ಜೀವರಾಜ್ ಹೇಳಿದ್ದಾರೆ.
ಕಾಂಗ್ರೆಸ್ ಸದಸ್ಯ ನೆ.ಲ. ನರೇಂದ್ರಬಾಬು ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಅವರು, ದಾವಣಗೆರೆ, ಗಂಗಾವತಿ, ಧಾರವಾಡ ಮತ್ತಿತರ ಕಡೆಗಳಿಂದಲೂ ಅಕ್ಕಿ ಸಂತೆಗೆ ಬೇಡಿಕೆ ಬಂದಿದ್ದು, ಈ ಭಾಗದಲ್ಲೂ ಅಕ್ಕಿ ಸಂತೆ ನಡೆಸಲಾಗುವುದು. ಜತೆಗೆ ರಾಜ್ಯದ ಯಾವುದೇ ಭಾಗದಿಂದ ಬೇಡಿಕೆ ಬಂದರೂ ಅಕ್ಕಿ ಸಂತೆ ನಡೆಸಲು ಅಕ್ಕಿ ಗಿರಣಿ ಮಾಲಿಕರು ಸಿದ್ಧರಿದ್ದಾರೆ ಎಂದರು.
ಅಕ್ಕಿ ದಾಸ್ತಾನು ನಿರ್ಬಂಧ: ಗಗನಮುಖಿಯಾಗುತ್ತಿದ್ದ ಅಕ್ಕಿ ಬೆಲೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಅಕ್ಕಿ ದಾಸ್ತಾನಿಗೆ ನಿರ್ಬಂಧ ಹೇರಿದ್ದು, ಈ ಕುರಿತಂತೆ ಹಲವು ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಇದರಿಂದಾಗಿ ಎಲ್ಲಾ ವರ್ಗದ ಅಕ್ಕಿ ಬೆಲೆ 5ರಷ್ಟು ಕಡಿಮೆಯಾಗಿದೆ ಎಂದು ಅವರು ತಿಳಿಸಿದರು.
ಅಕ್ಕಿ ದಾಸ್ತಾನು ನಿರ್ಬಂಧಕ್ಕೆ ವರ್ತಕರಿಂದ ವಿರೋಧ ವ್ಯಕ್ತವಾಗಿದೆ. ನಿರ್ಬಂಧ ಸಡಿಲಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಆದರೆ, ಅಕ್ಕಿ ದರ ಇಳಿಸಿದರೆ ದಾಸ್ತಾನು ನಿರ್ಬಂಧ ಸಡಿಲಿಸುವುದಾಗಿ ಅವರಿಗೆ ಸ್ಪಷ್ಟಪಡಿಸಲಾಗಿದೆ. ಬೆಲೆ ನಿಯಂತ್ರಣಕ್ಕೆ ಬರುವವರೆಗೆ ನಿರ್ಬಂಧ ಮುಂದುವರಿಯಲಿದೆ ಎಂದು ಹೇಳಿದರು.