ಎಲೆಕ್ಟ್ರಿಕ್ ರೈಲಿಗೆ ಸಂಸದರ ಮನವಿ
ತುಮಕೂರು: ತುಮಕೂರು-ಚಿಕ್ಕಬಾಣಾವರ ನಡುವಿನ ರೇಲ್ವೆ ಮಾರ್ಗ ವಿದ್ಯುದೀಕರಣ ಯೋಜನೆಗೆ ಈ ಬಾರಿಯ ರೇಲ್ವೆ ಮುಂಗಡ ಪತ್ರದಲ್ಲಿ ಅಸ್ತು ನೀಡಬೇಕೆಂದು ತುಮಕೂರು ಸಂಸದ ಜಿ.ಎಸ್. ಬಸವರಾಜ್ ಕೇಂದ್ರ ರೇಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.
ಈಗಾಗಲೇ ಯಶವಂತಪುರ-ಚಿಕ್ಕಬಾಣಾವರ ಮಾರ್ಗ ನಡುವಿನ ರೇಲ್ವೆ ಮಾರ್ಗ ವಿದ್ಯುದೀಕರಣ ಯೋಜನೆ ಕಾಮಗಾರಿಗೆ ಅನುಮೋದನೆ ದೊರೆತಿದೆ. ಕಾಮಗಾರಿ ಆರಂಭವಾಗಿದೆ. ಹಾಗಾಗಿ ಚಿಕ್ಕಬಾಣಾವರದಿಂದ ತುಮಕೂರಿನವರೆಗೆ ಈ ಯೋಜನೆ ವಿಸ್ತರಿಸಬೇಕೆಂದು ಮನವಿ ಮಾಡಿದ್ದಾರೆ.
ಯೋಜನೆ ಜಾರಿಯಾದರೆ ತುಮಕೂರು, ಬೆಂಗಳೂರು ನಡುವೆ ಕೈಗಾರಿಕಾ ವಸಾಹತುಗಳಾದ ಗೊಲ್ಲಹಳ್ಳಿ, ನೆಲಮಂಗಲ, ಡಾಬಸಪೇಟೆ, ನಿಡುವಂದ, ಹಿರೇಹಳ್ಳಿ ಮತ್ತು ತುಮಕೂರಿಗೆ ವೇಗದ ಸಮೂಹ ಸಾರಿಗೆ ವ್ಯವಸ್ಥೆ ಆಗಲಿದೆ.
ಇದಲ್ಲದೆ, ನಿಮ್ಜ್ ಯೋಜನೆ ತುಮಕೂರಿಗೆ ಮಂಜೂರಾಗುವ ಹಿನ್ನೆಲೆಯಲ್ಲಿ ಕಾರ್ಮಿಕ ವರ್ಗ ಸಂಚಾರಕ್ಕೆ ಅನುಕೂಲಕರ ಹಾಗೂ ರೇಲ್ವೆ ಇಲಾಖೆಯ ಏರಿಕೆಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.