ನವಜಾತ ಶಿಶುಪತ್ತೆ: ಆಸ್ಪತ್ರೆಗೆ ದಾಖಲು
ಕೊರಟಗೆರೆ: ರಸ್ತೆ ಬದಿಯ ಬೇಲಿಯಲ್ಲಿ ನವಜಾತ ಹೆಣ್ಣು ಶಿಶುವೊಂದನ್ನು ಯಾರೋ ಬಿಟ್ಟು ಹೋಗಿರುವ ಘಟನೆ ತಾಲೂಕಿನ ಅರಸಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಸ್ತೆ ಬದಿಯ ಬೇಲಿಯೊಂದರಲ್ಲಿ ಆಗ ತಾನೇ ಜನಿಸಿದ ಹೆಣ್ಣು ಮಗು ಬಿದ್ದಿರುವುದನ್ನು ಕಂಡ ಸಾರ್ವಜನಿಕರು ವೀಕ್ಷಿಸುತ್ತಿದ್ದರು. ಇದನ್ನು ಕಂಡ ಆಶಾ ಕಾರ್ಯಕರ್ತೆ ರಂಗಮ್ಮ ಹಾಗೂ ಅಂಗನವಾಡಿ ಕಾರ್ಯಕರ್ತೆ ಜ್ವಾಲಾಮಾಲಾ ಮತ್ತು ಎಎನ್‌ಎಂ ಲಕ್ಷ್ಮೀದೇವಮ್ಮ ಅವರು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಮತ್ತು ಸಿಡಿಪಿಓ ಹಾಗೂ ಪೊಲೀಸರ ಗಮನಕ್ಕೆ ತಂದಿದ್ದಾರೆ. ನಂತರ ಅಧಿಕಾರಿಗಳ ಸೂಚನೆ ಮೇರೆಗೆ ಮಗುವಿಗೆ ಪ್ರಾಥಮಿಕವಾಗಿ ಬೇಕಾದ ಚಿಕಿತ್ಸೆಗಳನ್ನು ನೀಡಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ.
ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಆರೋಗ್ಯ ಪರಿಶೀಲಿಸಿದ ಮಕ್ಕಳ ತಜ್ಞ ಡಾ.ಸಂತೋಷ್ ಮಗು ಆರೋಗ್ಯವಾಗಿದೆ ಎಂದು ದೃಢಪಡಿಸಿದ್ದಾರೆ. ನಂತರ ಸಿಡಿಪಿಓ ಹೊನ್ನೇಶಪ್ಪ ಅನಾಥ ಶಿಶು ಪತ್ತೆಯಾಗಿರುವ ಬಗ್ಗೆ ಕೊರಟಗೆರೆ ಪೊಲೀಸರಿಗೆ ದೂರು ನೀಡಿ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಯ ಜವಾಬ್ದಾರಿಗೆ ವಹಿಸುವುದಾಗಿ ತಿಳಿಸಿದರು.
ಮಗುವಿನ ಆರೋಗ್ಯದ ಸ್ಥಿತಿ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ.ಮೋಹನ್‌ದಾಸ್, ಸಿಡಿಪಿಓ ಹೊನ್ನೇಶಪ್ಪ, ಸಿಪಿಐ ಚಂದ್ರಶೇಖರ್, ಡಾ.ನಾಗಭೂಷಣ್ ಗಮನಹರಿಸಿದರು.