ಕುಣಿಗಲ್: ತಾಲೂಕಿನ ಯಡೆಯೂರು ಹೋಬಳಿಯ ಮಂಟ್ಯ ಗ್ರಾಮದಲ್ಲಿ, ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆ ನಿಟ್ಟಿನಲ್ಲಿ, ಒಕ್ಕೂಟದ ವಿಸ್ತರಣಾಧಿಕಾರಿ, ರಾಜಕಾರಣ ಮಾಡುತ್ತಾ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು ಪಟ್ಟಣದ ತುಮಕೂರು ಹಾಲು ಒಕ್ಕೂಟ ವಿಸ್ತರಣಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಾಲೂಕಿನ ಮಂಟ್ಯ ಗ್ರಾಮದಲ್ಲಿ 2009 ರಲ್ಲಿ ಹಾಲು ಸಂಗ್ರಹಣಾ ಉಪಕೇಂದ್ರ ಪ್ರಾರಂಭಿಸಲಾಗಿದೆ. ಹಾಲಿ ದಿನವೊಂದಕ್ಕೆ 600 ಲೀ. ಹಾಲು ಸಂಗ್ರಹವಾಗುತ್ತಿದೆ. 4 ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆ, ಸದರಿ ಗ್ರಾಮದಲ್ಲಿ ಮುಖ್ಯ ಕೇಂದ್ರ (ಹಾಲು ಉತ್ಪಾದಕರ ಸಹಕಾರ ಸಂಘ) ಸ್ಥಾಪನೆಗೆ, ಒಕ್ಕೂಟದ ನಿಯಮಾವಳಿಗಳ ಪ್ರಕಾರ ಗುರುವಾರ ಗ್ರಾಮಸಭೆ ನಡೆಸಿ, ಹಾಲು ಉತ್ಪಾದಕರಿಂದ, ಗ್ರಾಮಸ್ಥರಿಂದ ಷೇರುಹಣ ಸಂಗ್ರಹಣೆಗೆ ಸಭೆ ನಡೆಸುವುದಾಗಿ ತಾಲೂಕು ವಿಸ್ತರಣಾಧಿಕಾರಿ ನವ್ಯಶ್ರೀ ಅವರು ತಿಳಿಸಿದ ಹಿನ್ನೆಲೆ, ಗ್ರಾಮಸ್ಥರು ಎಲ್ಲಾ ವ್ಯವಸ್ಥೆ ಮಾಡಿದ್ದರು.
ಗುರುವಾರ ಗ್ರಾಮಕ್ಕೆ, ಒಕ್ಕೂಟದ ನಿರ್ದೇಶಕರೊಂದಿಗೆ ಆಗಮಿಸಿದ ವಿಸ್ತರಣಾಧಿಕಾರಿ, ಗ್ರಾಮಸ್ಥರೊಂದಿಗೆ ಚರ್ಚಿಸದೆ, ಸಭೆಯನ್ನು ನಡೆಸದೆ ಖಾಸಗಿ ವ್ಯಕ್ತಿಯೊಬ್ಬರ ಮನೆಗೆ ಭೇಟಿ ನೀಡಿ ತೆರಳಿದ್ದು ಗ್ರಾಮಸ್ಥರನ್ನು ಕೆರಳಿಸಿತಲ್ಲದೆ, ಸಾವಿರಾರು ರುಪಾಯಿ ಖರ್ಚು ಮಾಡಿ ಸಭೆಗೆ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿ ನಿರ್ಲಕ್ಷ್ಯತೋರಿದ್ದನ್ನು ಗ್ರಾಮಸ್ಥರು ಖಂಡಿಸಿದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ನೇತೃತ್ವದಲ್ಲಿ ಪಟ್ಟಣದ ಹಾಲು ಒಕ್ಕೂಟ ವಿಸ್ತರಾಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಚೇರಿಯಲ್ಲಿ ಕೃಷಿ ವಿಸ್ತರಣಾಧಿಕಾರಿ ಕೇಶವಮೂರ್ತಿಯೊಂದಿಗೆ ವಾಗ್ವಾದ ನಡೆಸಿದ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಇರಬಾರದು ಎಂದು ಹೇಳುವ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಡಿ.ಕೃಷ್ಣಕುಮಾರ್, ಕ್ಷುಲ್ಲಕ ರಾಜಕಾರಣ ಮಾಡುತ್ತಾ ಹಾಲು ಉತ್ಪಾದಕರಿಗೆ ಅನ್ಯಾಯ ಮಾಡುತ್ತಿರುವುದು ಖಂಡನೀಯ ಎಂದರು.
ಹಾಲು ಉತ್ಪಾದಕರ ಸಂಘ ಪ್ರಾರಂಭಿಸಲು ರೈತರು ಮುಂದಾದರೆ, ಬಿಜೆಪಿ ಪಕ್ಷದಿಂದ ನಿಲ್ಲುವ ತಮ್ಮನ್ನೇ ಬೆಂಬಲಿಸಿ ಇಲ್ಲವಾದರೆ ಹೇಗೆ ಸಂಘ ಪ್ರಾರಂಭಿಸುತ್ತೀರಾ ಎಂದು ಧಮಕಿ ಹಾಕುತ್ತಾರೆ. ತುಮಕೂರು ಹಾಲು ಒಕ್ಕೂಟ ರೈತ ಪರವಾಗಿದೆಯೇ ಅಥವಾ ಬಿಜೆಪಿ ಪಕ್ಷದ ಕಾರ್ಯಚಟುವಟಿಕೆಯ ಅಂಗವೇ? ಮೂಲತಃ ಡಿ.ಕೃಷ್ಣಕುಮಾರ್ ಜೆಡಿಎಸ್ನಲ್ಲಿದ್ದಾಗ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಾಕತ್ತಿದ್ದರೆ, ರಾಜಿನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಲಿ, ಅಧಿಕಾರಿಗಳು ಸಹಕಾರ ಸಂಘ, ಒಕ್ಕೂಟದ ನಿಯಮಾವಳಿಗೆ ಒಳಗಾಗಿ ಕೆಲಸ ಮಾಡಿ, ಇಲ್ಲವಾದರೆ ಜನತೆಯೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೇಶವಮೂರ್ತಿ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಯಾವುದೇ ಗ್ರಾಮಸಭೆ ನಡೆಸಿಲ್ಲ. ಈ ಬಗ್ಗೆ ಮುಂದಿನ ಸೋಮವಾರ ಒಕ್ಕೂಟದ ಹಿರಿಯ ಅಧಿಕಾರಿಗಳು ಆಗಮಿಸಲಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.