ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಂದಿಕೆರೆ ಹೋಬಳಿಗೆ ಹೇಮಾವತಿ ಯೋಜನೆ ಜಾರಿಗೆ ಶ್ರಮಿಸುವೆ

Mainashree
Updated On : 9 Feb 2013, 11:20 am

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಗುಡ್ಡದಸೀಮೆ ಎಂದು ಕರೆಸಿಕೊಳ್ಳುವ ಅತಿ ಹಿಂದುಳಿದ ಭಾಗವಾದ ಕಂದಿಕೆರೆ ಹೋಬಳಿಗೆ ಕುಡಿಯುವ ನೀರಿನ ಯೋಜನೆಗೆ ಜಾರಿಗೆ ನನ್ನ ಮೊದಲ ಆಧ್ಯತೆ ಎಂದು ಮಾಜಿ ಶಾಸಕ ಕೆ.ಎಸ್. ಕಿರಣ್ಕುಮಾರ್ ನುಡಿದರು.
ತೀರ್ಥಪುರ, ರಾಮನಹಳ್ಳಿ, ತಿಮ್ಮನಹಳ್ಳಿ ಗ್ರಾಮಪಂಚಾಯ್ತಿಗಳಲ್ಲಿ ಮನೆಮನೆಗೆ ಬಿಜೆಪಿ ಜನಜಾಗರಣ ಅಭಿಯಾನ ಕಾರ್ಯಕ್ರಮದ ಸಂದರ್ಭದಲ್ಲಿ ಬಿಜೆಪಿಗೆ ಸೇರಿದ ನೂರಾರು ಜನರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಅತಿ ಹಿಂದುಳಿದ ಪ್ರದೇಶವಾದ ಕಂದಿಕೆರೆ ಹೋಬಳಿ ಪ್ರಾರಂಭದಿಂದಲು ರಾಜಕಾರಣಿಗಳ ನಿರ್ಲಕ್ಷಕ್ಕೊಳಗಾಗಿದೆ. ಈ ಭಾಗದ ಜನರಿಗೆ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ಮತ ಪಡೆದವರು ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸದ ಪರಿಣಾಮ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಆದರೆ ನಮ್ಮ ಪಕ್ಷ ಮತ್ತು ಸರ್ಕಾರ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ  ಯಾವತ್ತು ನಿರ್ಲಕ್ಷ ಮಾಡಿಲ್ಲ. ಇದಕ್ಕೆ ಉದಾಹರಣೆ 102 ಕೋಟಿ ರು.ಗಳ ಹೇಮಾವತಿ ಕುಡಿಯುವ ನೀರಿನ ಯೋಜನೆ ಜಾರಿಯೇ ಸಾಕ್ಷಿಯಾಗಿದೆ. ಕಳೆದ ವಾರ ಬುಕ್ಕಾಪಟ್ಣದಲ್ಲಿ ನಡೆದ ನೀರಾವರಿ ಹೋರಾಟವನ್ನು ಗಮನಿಸಿ, ಆ ಭಾಗದ ಜನರ ನಿಯೋಗದೊಂದಿಗೆ ನಾನು, ಶಾಸಕರಾದ ಟಿ.ಬಿ.ಜಯಚಂದ್ರ, ಸಿ.ಬಿ.ಸುರೇಶ್ ಬಾಬು  ಸರ್ಕಾರದ ಮಟ್ಟದಲ್ಲಿ ಮನವಿ ಮಾಡಿದ ಪರಿಣಾಮ ಹಾಗಲವಾಡಿ, ಬುಕ್ಕಾಪಟ್ಣ ಹೋಬಳಿ ಕುಡಿಯುವ ನೀರಿನ ಯೋಜನೆ ತಾಂತ್ರಿಕ ಸಲಹಾ ಸಮಿತಿಯಲ್ಲಿ ಅನುಮೋದನೆಯಾಗಿದೆ. ತ್ವರಿತವಾಗಿ ಯೋಜನೆಯ ಅಳತೆ ಕಾರ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಶ್ರಮಿಸುವುದಾಗಿ ಅವರು ನುಡಿದರು.
ಒತ್ತಡ: ಅದರಂತೆ ಕಂದಿಕೆರೆ ಹೋಬಳಿಯ ಸಿಂಗದಹಳ್ಳಿ, ರಾಮನಹಳ್ಳಿ, ಗಂಟೇನಹಳ್ಳಿ ಮುಂತಾದ ಕೆರೆಗಳಿಗೆ ಗುಬ್ಬಿ ತಾಲೂಕಿನ ಅದಲಗೆರೆ ಕೆರೆಯಿಂದ ನೀರನ್ನು ಹರಿಸಲು ಸಾಧ್ಯತೆಯಿದ್ದು, ಅದರ ಬಗ್ಗೆ ಗಮನಹರಿಸಿದ್ದೇವೆ. ಅದನ್ನು ಆದಷ್ಟು ಶೀಘ್ರವಾಗಿ ಕೈಗೆತ್ತಿಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
ಸೇರ್ಪಡೆ: ಅವರು ರಾಜ್ಯ ಬಿಜೆಪಿ ಕರೆಯಂತೆ ಮನೆಮನೆಗೆ ಬಿಜೆಪಿ ಜನಜಾಗರಣ ಅಭಿಯಾನದ ಪ್ರಯುಕ್ತ ಕಂದಿಕೆರೆ ಹೋಬಳಿಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಹಲವಾರು ಜನ ವಿವಿಧ ಪಕ್ಷಗಳ ಅಂದರೆ ಜೆಡಿಯು ಮತ್ತು ಜೆಡಿಎಸ್ ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದ್ಲಿ ಮಾತನಾಡಿದ ಕಾರ್ಯಕರ್ತರು ಇದುವರೆಗೆ ಹಲವಾರು ಪಕ್ಷಗಳನ್ನು ಮತ್ತು ಅವುಗಳ ಮುಖಂಡರುಗಳನ್ನು ನೋಡಿದ್ದೇವೆ. ಬರೀ ಭರವಸೆ ನೀಡುವುದನ್ನು ಬಿಟ್ಟರೆ ಯಾವುದೇ ರೀತಿ ತೂಕಿನ ಅಭಿವೃದ್ಧಿಯಾಗಿಲ್ಲ. ಆದರೆ ಕಿರಣ್ಕುಮಾರ್ ಅವರು ಕಳೆದ ಚುನಾವಣೆಯಲ್ಲಿ ತಾಲೂಕಿನ ಮತದಾರರು ತಮ್ಮನ್ನು ಕೈಬಿಟ್ಟರೂ ಸಹ ಅವರು ಕ್ಷೇತ್ರದ ಅಭಿವೃದ್ಧಿಯನ್ನು ಕೈಬಿಡಲಿಲ್ಲ. ತಮ್ಮದೇ ಆದ ಬಿಜೆಪಿ ಸರ್ಕಾರದಲ್ಲಿ ಹೋರಾಡಿ 102 ಕೋಟಿ ರೂಗಳ ಹೇಮಾವತಿ ಕುಡಿಯುವ ನೀರಿನ ಯೋಜನೆಯನ್ನು ತಾಲೂಕಿಗೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗದ್ದಾರೆ. ಆದ್ದರಿಂದ ನಾವೆಲ್ಲಾ ಅವರ ನಾಯಕತ್ವದಲ್ಲಿ ನಂಬಿಕೆಯಿಟ್ಟು ಬಿಜೆಪಿಯನ್ನು ಸೇರಿದ್ದೇವೆ ಎಂದು ಕಾರಪ್ಪ, ಸಣ್ಣರಂಗಯ್ಯ, ಯಜಮಾನ್ ಡಿ.ಆರ್.ನಾಗರಾಜು ನುಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಮಿಲಿಟರಿ ಶಿವಣ್ಣ, ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ತೀರ್ಥಪುರ ಗಂಗಾಧರ್, ಮಾಜಿ ಪ್ರಧಾನರಾದ ವೀರಭದ್ರಯ್ಯ, ದೊಡ್ಡರಾಂಪುರ ರವಿಕುಮಾರ್, ನಾಗಭೂಷಣ, ತಾಪಂ ಮಾಜಿ ಅಧ್ಯಕ್ಷ ಜಿ.ಆರ್. ಸೀತಾರಾಮಯ್ಯ, ತಾಪಂ ಸದಸ್ಯ ವಸಂತಕುಮಾರ್, ಮಮತ, ಜಾಣೇಹಾರ್ ಸುರೇಶ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement